ಹಾವೇರಿ: ತಾಲೂಕಿನ ದೇವಿಹೊಸೂರ ಗ್ರಾಮದ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆಯ ಆರನೇ ತರಗತಿಯ ದಲಿತ ಬಾಲಕಿಯನ್ನು ಶಿಕ್ಷಕಿಯೊಬ್ಬರು ಬೆಂಚ್ ಬಿಟ್ಟು ಒಬ್ಬಳನ್ನೇ 15 ದಿನಗಳವರೆಗೆ ನೆಲದ ಮೇಲೆ ಕೂರಿಸುವ ಮೂಲಕ ಅಸ್ಪಶ್ಯತೆಯನ್ನು ಪ್ರದರ್ಶಿಸಿದ್ದಾರೆ ಎಂದು ಬಾಲಕಿಯ ಪಾಲಕರು ಆರೋಪಿಸಿದ್ದಾರೆ. ತರಗತಿ ನಡೆಯುವ ವೇಳೆ ಬಾಲಕಿ ಗಲಾಟೆ ಮಾಡುತ್ತಾಳೆ ಎಂದು ಆರೋಪಿಸಿ ಅತಿಥಿ ಶಿಕ್ಷಕಿ ರಾಜಶ್ರೀ ಕದಮನವರ ಎಂಬುವರು ಬಾಲಕಿಯನ್ನು ಬೆಂಚ್ ಬಿಟ್ಟು ನೆಲದ ಮೇಲೆ ಕೂರಿಸಿದ್ದರು. ಒಂದು, ಎರಡು ದಿನ ಆದರೆ ಸುಮ್ಮನಿರುತ್ತಿದ್ದೆವು. 15 ದಿನಗಳವರೆಗೆ ನೆಲದ ಮೇಲೆ ಒಬ್ಬಳನ್ನೇ ಕೂರಿಸಿದ್ದರಿಂದ ಆಕೆಯ ಮನಸಿಗೆ ಆಘಾತವಾಗಿದೆ. ದಲಿತ ಬಾಲಕಿ ಎಂಬ ಕಾರಣಕ್ಕೆ ಶಿಕ್ಷಕಿ ಹಾಗೆ ಮಾಡಿ ಭೇದ ಭಾವ ತೋರಿದ್ದಾರೆ. ಈ ಬಗ್ಗೆ ಮುಖ್ಯೋಪಾಧ್ಯಾಯರು, ಇತರ ಶಿಕ್ಷಕರ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ದಲಿತರ ಮೇಲೆ ಅಸ್ಪಶ್ಯತೆ ತೋರಿದ ಶಿಕ್ಷಕಿ ಹಾಗೂ ನಿರ್ಲಕ್ಷೃ ತೋರಿದವರ ವಿರುದ್ಧ ಕ್ರಮ ಜರುಗಿಸಿ ಎಂದು ಬಾಲಕಿಯ ತಂದೆ ಮಾಲತೇಶ ಸಾವಿಕೇರಿ ಆಗ್ರಹಿಸಿದ್ದಾರೆ.
ಮೂವರು ಶಿಕ್ಷಕರಿಗೆ ಬಿಇಒ ನೋಟಿಸ್
ದಲಿತ ಬಾಲಕಿಯನ್ನು ನೆಲದ ಮೇಲೆ ಕೂರಿಸಿದ ಕುರಿತು ಬಾಲಕಿಯ ಪಾಲಕರು ಬಿಡಿಒ ಮೌನೇಶ ಬಡಿಗೇರ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಬಿಇಒ ಅತಿಥಿ ಶಿಕ್ಷಕಿ ರಾಜಶ್ರೀ ಕದಮನವರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ. ಈ ಬಗ್ಗೆ ಗಮನಕ್ಕೆ ಬಂದರೂ ನಿರ್ಲಕ್ಷೃ ತೋರಿದ ಆರೋಪದ ಹಿನ್ನೆಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿ ಸುಮತಿ ಎಸ್.ಎನ್., ಸಹ ಶಿಕ್ಷಕಿ ಎಲ್.ಜಿ.ಪಾಲನಕರ ಹಾಗೂ ದೈಹಿಕ ಶಿಕ್ಷಕಿ ಎಫ್.ಎಚ್.ದನಕಟ್ಟವರಗೆ ಬಿಇಒ ನೋಟಿಸ್ ನೀಡಿದ್ದಾರೆ. ನೋಟಿಸ್‌ಗೆ ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಬಿಇಒ ಬಡಿಗೇರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.