ವಿಶ್ವಕ್ಕೆ ಉತ್ತಮ ಸಂದೇಶ ಸಾರಿದ ಆದ್ಯ ವಚನಕಾರ ದೇವರದಾಸಿಮಯ್ಯ; ತಹಸೀಲ್ದಾರ್ ಕೆ.ಶರಣ್ಣಮ್ಮ ಅಭಿಪ್ರಾಯ

3 HVR 4
Published on

ಹಾವೇರಿ: ವಿಶ್ವಕ್ಕೆ ಉತ್ತಮ ಸಂದೇಶ ಸಾರಿದ ಆದ್ಯ ವಚನಕಾರ ದೇವರದಾಸಿಮಯ್ಯ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ತಹಸೀಲ್ದಾರ್ ಕೆ.ಶರಣ್ಣಮ್ಮ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರು ಮಾತನಾಡಿದರು.

ದೇವರ ದಾಸಿಮಯ್ಯನವರು ವಚನಕಾರರಲ್ಲಿಯೇ ಮೊದಲಿಗರು. 12ನೇ ಶತಮಾನದಲ್ಲಿ ಧಾರ್ಮಿಕತೆಯ ಸೃಷ್ಟಿಗೆ ಅದ್ಭುತವಾದ ಕಾಲವಾಗಿತ್ತು. ಇಂದಿನ ಕಾಲಘಟದಲ್ಲಿ ಮಕ್ಕಳಲ್ಲಿ ಉತ್ತಮ ಶಿಕ್ಷಣದ ಜತೆಗೆ ವಚನ ಗ್ರಂಥಗಳ ಕಲಿಕೆಗೆ ಪ್ರೋತ್ಸಾಹಿಸಬೇಕು. ಇದರಿಂದ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸಿ ಸನ್ಮಾರ್ಗದಲ್ಲಿ ನಡೆಯಲು ಸಹಾಯಕಾರಿಯಾಗುತ್ತದೆ ಎಂದರು.

ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ವಿಶ್ವನಾಥ ಬೊಂದಾಡೆ ದೇವರ ದಾಸಿಮಯ್ಯನವರ ಜೀವನ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ ಚಿನ್ನಿಕಟ್ಟಿ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಗೌರವಾಧ್ಯಕ್ಷ ಡಾ.ಬಸವರಾಜ ಕೇಲಗಾರ, ಜಿಲ್ಲಾಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ, ಹಾವೇರಿ ನಗರ ದೇವಾಂಗ ಸಮಾಜದ ಗೌರವಾಧ್ಯಕ್ಷ ಡಿ.ಆರ್ ಕುದರಿ, ಹಾವೇರಿ ನಗರ ದೇವಾಂಗ ಸಮಾಜದ ಅಧ್ಯಕ್ಷ ಸೋಮನಾಥ ಕುದರಿ, ಹಾವೇರಿ ಬನಶಂಕರಿದೇವಿ ಸಮುದಾಯ ಭವನದ ಅಧ್ಯಕ್ಷ ವೆಂಕಟೇಶ ಕುದರಿ, ಹಾವೇರಿ ತಾಲೂಕು ದೇವಾಂಗ ಸಂಘದ ಅಧ್ಯಕ್ಷ ಚಿದಂಬರ ಕುದರಿ, ಹಾವೇರಿ ನೇಕಾರ ಸಮುದಾಯಗಳ ಒಕ್ಕೂಟದ ನಿರ್ದೇಶಕರಾದ ಮಹೇಶ ಕುದರಿ, ದ್ಯಾಮಪ್ಪ ಸುಂಕಾಪುರ, ದೇವರಾಜ ಸಾಲಿ, ಅರ್ಚಕ ಮುಸಂಗಸ್ವಾಮಿ ದೇವಾಂಗಮಠ, ಸಮುದಾಯಗಳ ಪ್ರಮುಖರು, ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net