ಮೂಲಸೌಲಭ್ಯಕ್ಕೆ ಹಾಸ್ಟೆಲ್ ವಿದ್ಯಾರ್ಥಿಗಳ ಆಗ್ರಹ; ದೇವಗಿರಿ ಯಲ್ಲಾಪುರದ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ಪ್ರತಿಭಟನೆ

8 HVR 8
Published on

ಹಾವೇರಿ: ನಗರದ ಹೊರವಲಯ ಡಿಸಿ ಕಚೇರಿ ರಸ್ತೆ ದೇವಗಿರಿ ಯಲ್ಲಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ನಂ 3ನಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಸತಿ ನಿಲಯದ ಎದುರು ಪ್ರತಿಭಟನೆ ನಡೆಸಿದರು.

ನೂರಾರು ವಿದ್ಯಾರ್ಥಿಗಳು ದೂರದ ಊರಿನಿಂದ ಬಂದು ವಸತಿ ನಿಲಯದಲ್ಲಿ ಆಶ್ರಯ ಪಡೆದು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಆದರೆ, ಗುಣಮಟ್ಟದ ಆಹಾರ, ನೀರು ಸಿಗದೇ ಕಂಗಾಲಾಗಿದ್ದಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ದೊರೆತಿಲ್ಲ. ಶುಚಿ ಸಂಭ್ರಮ ಕಿಟ್ ವಿತರಣೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಯಾವುದೇ ಕ್ರೀಡಾ ಸಾಮಗ್ರಿ ವಿತರಿಸಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಕೂಡಲೇ ಹಾಸ್ಟೆಲ್‌ನಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಿ, ವಿದ್ಯಾರ್ಥಿಗಳ ಎಲ್ಲ ಬೇಡಿಕೆಗಳನ್ನು ಪೂರೈಸಲು ಇಲಾಖೆ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಬೇಕು. ಕಿಟ್ ವಿತರಣೆ ತಾರತಮ್ಯ ಪರಿಹರಿಸಬೇಕು. ಆಯಾ ತಿಂಗಳ ಕಿಟ್ ಅನ್ನು ಅದೇ ತಿಂಗಳಲ್ಲೇ ವಿತರಿಸಬೇಕು. ಯಾವುದೇ ಹಾಸ್ಟೆಲ್ಗಳಲ್ಲಿ ಬಾಕಿ ಇಟ್ಟುಕೊಳ್ಳಲು ಅವಕಾಶ ನೀಡಬಾರದು. ಕಿಟ್ ವಿತರಣೆಯಲ್ಲಿ ಲಕ್ಷಾಂತರ ರೂಪಾಯಿ ಹಗರಣವಾಗಿದೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಡಿಡಿ ಪ್ರಶಾಂತ ವರಗಪ್ಪನವರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ನಂತರ ಡಿಡಿಗೆ ಮನವಿ ಪತ್ರ ಸಲ್ಲಿಸಿದರು.

ಹಾಸ್ಟೆಲ್ ಘಟಕದ ಅಧ್ಯಕ್ಷ ದಯಾನಂದ, ರೇವಣ್ಣಸಿದ್ದೇಶ, ಅರವಿಂದ ಆಡೂರ, ಜಯೇಶ ಎಸ್., ನಂದೀಶ ಬಿ., ಗಣೇಶ ಎಚ್., ಸುದರ್ಶನ ಕೆ., ಕಿರಣ ಬಿ., ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net