ನಮೋ ಬ್ರಿಗೇಡ್‌ನಿಂದ ‘ಜನ ಗಣ ಮನ’ ಬೈಕ್ ರ್ಯಾಲಿ

12 HVR 4 A
Published on

ಹಾವೇರಿ: ನಮೋ ಬ್ರಿಗೇಡ್ 2.0 ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಜನ ಗಣ ಮನ ಬೆಸೆಯೋಣ’ ಹೆಸರಿನ ಬೈಕ್ ರ್ಯಾಲಿ ಜರುಗಿತು. ನೂರಾರು ಯುವಕರು ಬೈಕ್ ಏರಿ ನರೇಂದ್ರ ಮೋದಿ ಪರ ಹಾಗೂ ಕೇಂದ್ರ ಸರ್ಕಾರದ ಪರ ಘೋಷಣೆ ಕೂಗಿದರು.
ನಗರದ ಆರ್‌ಟಿಒ ಕಚೇರಿ ಸಮೀಪದ ಅಜ್ಜಯ್ಯನ ಗುಡಿಯಿಂದ ಆರಂಭವಾದ ಬೈಕ್ ರ‌್ಯಾಲಿ, ಹೊಸಮನಿ ಸಿದ್ದಪ್ಪ ವೃತ್ತ, ಸಂಗೂರ ಕರಿಯಪ್ಪ ವೃತ್ತ, ಹುಕ್ಕೇರಿ ಮಠ, ಪುರದ ಓಣಿ, ಗಾಂಧಿ ವೃತ್ತ, ಮುನ್ಸಿಪಲ್ ಹೈಸ್ಕೂಲ್ ಮಾರ್ಗವಾಗಿ ದೇವಗಿರಿ ತಲುಪಿತು. ಸಂಜೆ ದೇವಗಿರಿಯ ತೇರಿನ ಮನೆ ಆವರಣದಲ್ಲಿ ಬಹಿರಂಗ ಸಮಾವೇಶ ಜರುಗಿತು.
ನಮೋ ಬ್ರಿಗೇಡ್ ಸಂಚಾಲಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಕಾಂಗ್ರೆಸ್‌ನವರು ಜಾತಿಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಪ್ರಧಾನಿ ಮೋದಿಯವರು ದೇಶದ ಜಾತಿಗಳನ್ನು ಬೆಸೆಯುವ ಪ್ರಯತ್ನ ಮಾಡಿದ್ದಾರೆ. ಇಂಗ್ಲೆಂಡ್‌ನ ಪ್ರಧಾನಿ ನಾನೊಬ್ಬ ಹಿಂದು ಎಂದು ಗರ್ವದಿಂದ ಹೇಳಿಕೊಳ್ಳುತ್ತಿದ್ದರೆ, ಕಾಂಗ್ರೆಸ್‌ನವರು ಹಿಂದು ಧರ್ಮ ನಾಶವಾಗಲಿ ಎಂದು ಹೇಳುತ್ತಿದ್ದಾರೆ. ಮೋದಿ ಅವರು ವಂದೇ ಭಾರತ ರೈಲು ಬಿಡುವ ಮೂಲಕ ರೈಲ್ವೆ ಇಲಾಖೆಯಲ್ಲಿ ಕ್ರಾಂತಿ ಮಾಡಿದ್ದಾರೆ. ಇತ್ತೀಚೆಗೆ ಜಪಾನ್ ದೇಶದೊಂದಿಗೆ ಒಪ್ಪಂದವಾಗಿದ್ದು, 24 ಬುಲೆಟ್ ರೈಲುಗಳು ಭಾರತಕ್ಕೆ ಬರಲಿವೆ ಎಂದರು.
ಕೂಡಲದ ಶ್ರೀ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣವರ, ಶರಣು ಅಂಗಡಿ, ನಿರಂಜನ ಹೇರೂರ, ಅಭಿಷೇಕ ಉಪ್ಪಿನ, ಪಾಲಾಕ್ಷಗೌಡ ಪಾಟೀಲ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net