ಮುಂದಿನ ಪೀಳಿಗೆಗೆ ಸುಂದರ ಪರಿಸರ ಕೊಡಿ; ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ; ಆರ್‌ಎಫ್ ಒ ಶ್ರೀನಿವಾಸ ಆರ್. ಹೇಳಿಕೆ

14 HVR 3
Published on

ಹಾವೇರಿ: ಪರಿಸರವನ್ನು ಕಾಪಾಡುವುದು ಕೇವಲ ಸರ್ಕಾರದ ಕೆಲಸವಲ್ಲ. ಪ್ರತಿಯೊಬ್ಬ ನಾಗರಿಕರ ಕರ್ತವ್ಯವೂ ಹೌದು. ಶುದ್ದವಾದ ಪರಿಸರ, ಮಣ್ಣು, ಗಾಳಿ ಇವುಗಳನ್ನು ಸ್ವಚ್ಛ ಹಾಗೂ ಸುಂದರವಾಗಿ ಮುಂದಿನ ಪೀಳಿಗೆಗೆ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಶ್ರೀನಿವಾಸ ಆರ್. ಅಭಿಪ್ರಾಯಪಟ್ಟರು. ತಾಲೂಕಿನ ದೇವಗಿರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-1ರಲ್ಲಿ ಬಜ್ ವುಮೆನ್ ಇಂಡಿಯಾ ಸಂಸ್ಥೆಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

2019ರಲ್ಲಿ ಕೋವಿಡ್ ಸಂದರ್ಭದಲ್ಲಿ ಶುದ್ದ ಗಾಳಿಯನ್ನು ಹಣ ನೀಡಿ ಪಡೆದುಕೊಂಡಿದ್ದೇವೆ. ಇಂತಹ ಪರಿಸ್ಥಿತಿಯನ್ನು ಮುಂದಿನ ಪೀಳಿಗೆ ಅನುಭವಿಸಬಾರದು ಎಂದರೆ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಳ್ಳಬೇಕು. ಮನೆಗೊಂದು ಮರ ಊರಿಗೊಂದು ವನ ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನಾದರೂ ನೆಡಬೇಕು. ಅಂದಾಗ ಮಾತ್ರ ಶುದ್ಧವಾದ ಪರಿಸರವನ್ನ ಕಾಪಾಡಲು ಸಾಧ್ಯ ಎಂದರು.

ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಕಾಡಪ್ಪನವರ ಮಾತನಾಡಿ, ಬಾಲ್ಯ ವಿವಾಹವಾಗದಂತೆ ಪ್ರತಿಯೊಬ್ಬರೂ ನೋಡಿಕೊಳ್ಳಬೇಕಿದೆ. ಮಹಿಳೆಯು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಬೆಳವಣಿಗೆಯಾಗಲು ಪೌಷ್ಟಿಕ ಆಹಾರದ ಅಗತ್ಯತೆ ತುಂಬಾ ಇದೆ. ಇಂದಿನ ಮಕ್ಕಳಿಗೆ ಶೇಖರಿಸಿದ ಪ್ಯಾಕೆಟ್ ಫುಡ್ ಪ್ರಭಾವ ಇರುವುದರಿಂದ ಮಕ್ಕಳಲ್ಲಿ ಆರೋಗ್ಯಕರ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಇದನ್ನು ಸರಿಪಡಿಸಲು ಮನೆಯ ಆಹಾರವನ್ನು ಮಾತ್ರ ಬಳಸಬೇಕು ಮತ್ತು ಪರಿಸರವನ್ನ ಸಂರಕ್ಷಣೆ ಮಾಡಿದಲ್ಲಿ ಮಾತ್ರ ಉತ್ತಮ ಆಹಾರವನ್ನ ಪಡೆಯಲು ಸಾಧ್ಯ ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರ ಪಾರಿಗಂಟಿ, ಬಜ್ ವುಮೆನ್ ಇಂಡಿಯಾದ ಜಿಲ್ಲಾ ವ್ಯವಸ್ಥಾಪಕ ಚನ್ನಬಸವ, ನೇತ್ರಾ ಧರಿಯಪ್ಪನವರ ಮಾತನಾಡಿದರು.

ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎನ್ ಅಣ್ಣಿಗೇರಿ, ಎಸ್‌ಡಿಎಂಸಿ ಅಧ್ಯಕ್ಷ ಚನ್ನಪ್ಪ ಚನ್ನಾಪುರ, ಮಂಜುನಾಥ ಬಿಷ್ಟನಗೌಡ್ರ, ರೇಣುಕಾ ಕಹಾರ, ಚಂದ್ರಪ್ಪ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net