ಗುರು-ಶಿಷ್ಯರ ಪರಂಪರೆ ಎಂದಿಗೂ ಮರೆಯದಿರಿ; ಬಿಎಂಐಪಿ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಆರ್.ಎಸ್.ಪಾಟೀಲ ಹೇಳಿಕೆ

6 HVR 10
Published on

ಹಾವೇರಿ: ಡಾ.ರಾಧಾಕೃಷ್ಣನ್ ಅವರ ಸ್ಪೂರ್ತಿಯನ್ನು ಪಡೆದುಕೊಂಡು ಉತ್ತಮ ಪ್ರಜೆಗಳಾಗಬೇಕು. ಗುರು- ಶಿಷ್ಯರ ಪರಂಪರೆಯನ್ನು ನಾವೆಂದೂ ಮರೆಯಬಾರದು ಎಂದು ನಿವೃತ್ತ ಮುಖ್ಯೋಪಾಧ್ಯಾಯ, ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಆರ್.ಎಸ್.ಪಾಟೀಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ದೇವಗಿರಿಯ ಬಿ.ಎಂ. ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಿಗುವ ಅವಕಾಶವನ್ನು ಬಳಸಿಕೊಂಡು ಬೆಳೆಯಬೇಕು. ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಶಿಷ್ಯರನ್ನು ಬಹಳ ಪ್ರೀತಿಯಿಂದ ಗೌರವಿಸುತ್ತಿದ್ದರು. ಅವರ ಆದರ್ಶಗಳನ್ನು ಅಳವಡಿಸಿಕೊಂಡು ಇಂದಿನ ವಿದ್ಯಾರ್ಥಿಗಳು ನಾಳೆಯ ಉತ್ತಮ ಪ್ರಜೆಗಳಾಗಿ ಜೀವನ ರೂಪಿಸಕೊಳ್ಳಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಪ್ರೊ.ಮಾ.ನಾಗರಾಜ ಮಾತನಾಡಿ, ಇಂದಿನ ಸಮಾಜದಲ್ಲಿ ಶಿಕ್ಷಕರನ್ನು ಪ್ರೀತಿಯಿಂದ ಗೌರವಿಸುವುದು ಮುಖ್ಯವಾಗಿದೆ. ವಿದ್ಯಾರ್ಥಿಗಳು ಮೊಬೈಲ್ನಿಂದ ಹಾಳಾಗುತ್ತಿದ್ದಾರೆ. ಮೊಬೈಲ್ ಬಿಟ್ಟು ದೂರವಿದ್ದು ನಿರಂತರ ಅಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದರು.

ವಿದ್ಯಾರ್ಥಿಗಳು ಶಿಕ್ಷಕರಿಗೆ ಅಭಿನಂದನಾ ಪತ್ರಿಕೆ ಹಾಗೂ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಭಾವಗೀತೆ, ನೃತ್ಯ, ನಾಟಕ, ಹಾಗೂ ಭಾಷಣಗಳ ಮೂಲಕ ಗೌರವ ಸಲ್ಲಿಸಿದರು.

ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಮಾತನಾಡಿದರು. ಪ್ರಾಂಶುಪಾಲ ಸಿದ್ದಲಿಂಗಸ್ವಾಮಿ ನೀರಲಗಿಮಠ, ಉಪ ಪ್ರಾಂಶುಪಾಲೆ ಮೇರಿ, ಶಿಕ್ಷಕರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net