ಡೆಂಘೆ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಿ; 'ವಿಜಯವಾಣಿ' ವರದಿ ಬೆನ್ನಲ್ಲೇ ಆರೋಗ್ಯ ಇಲಾಖೆಗೆ ಸಚಿವ ಶಿವಾನಂದ ಪಾಟೀಲ ನಿರ್ದೇಶನ

Shivanand Patil
Published on


ಹಾವೇರಿ: ಜಿಲ್ಲೆಯಲ್ಲಿ ಡೆಂಘೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಶಂಕಿತ ಡೆಂಘೆ ಇರುವವರನ್ನು ಗುರುತಿಸಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಡೆಂಘೆ ಪ್ರಕರಣಗಳು ವರದಿಯಾಗಿರುವ ಹಳ್ಳಿಗಳು ಸೇರಿದಂತೆ ಅಗತ್ಯ ಇರುವ ಎಲ್ಲೆಡೆ ಸೊಳ್ಳೆಗಳ ನಿಯಂತ್ರಣಕ್ಕೆ ಧೂಮೀಕರಣ ಮಾಡಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಯ್ದುಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಜಿಲ್ಲೆಯಾದ್ಯಂತ ಡೆಂಘೆ, ಮತ್ತಿತರ ಕೀಟಜನ್ಯ ರೋಗಗಳು ಹರಡದಂತೆ ವ್ಯಾಪಕವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಲಾರ್ವಾಗಳ ಸಮೀಕ್ಷೆ ಮಾಡಿ, ಕೂಡಲೇ ನಾಶಪಡಿಸಬೇಕು. ಹೆಚ್ಚು ಪ್ರಕರಣಗಳು ವರದಿಯಾಗುರುವ ಗ್ರಾಮಗಳ ಪಂಚಾಯಿತಿಯಲ್ಲಿ ಸಭೆ ನಡೆಸಿ ಡೆಂಘೆ ಮತ್ತು ಚಿಕೂನ್ ಗುನ್ಯಾ ಹರಡದಂತೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಆಶಾ ಕಾರ್ಯಕರ್ತೆಯರ ಮೂಲಕ ಹಾಗೂ ಭಿತ್ತಿಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಪತ್ರದ ಮೂಲಕ ನಿರ್ದೇಶನ ನೀಡಿದ್ದಾರೆ.
ವಿವಿಧ ಗ್ರಾಮಗಳಿಗೆ ಡಿಎಚ್ ಭೇಟಿ
ಸಚಿವರ ನಿರ್ದೇಶನದ ಹಿನ್ನೆಲೆಯಲ್ಲಿ ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಜಯಾನಂದ ಹಾಗೂ ಅಧಿಕಾರಿಗಳ ಬುಧವಾರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲಿಸಿದೆ. ಗ್ರಾಪಂಗಳಲ್ಲಿ ಸಭೆ ನಡೆಸಿ, ಡೆಂಘೆ ತಡೆಗೆ ಸೂಚನೆ ನೀಡದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net