ಬೇಸಿಗೆ ಮಳೆಗೂ ಶುರುವಾದ ರೋಗ ಭೀತಿ ! 20 ಡೆಂಗ್ಯೂ, 1 ಚಿಕೂನ್ ಗುನ್ಯ, 1 ಮಲೇರಿಯಾ ಕೇಸ್ ಪತ್ತೆ; ಮುನ್ನೆಚ್ಚರಿಕೆ ಹೆಜ್ಜೆಯತ್ತ ಆರೋಗ್ಯ ಇಲಾಖೆ

Dengue cases Story
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಕಳೆದ ವರ್ಷ ಚಿಕೂನ್ ಗುನ್ಯ ಹಾಗೂ ಡೆಂಗ್ಯೂ ಜ್ವರ ಜನರ ಜೀವ ಹಿಂಡಿತ್ತು. ಈ ವರ್ಷವೂ ಬೇಸಿಗೆ ಅವಧಿಯಲ್ಲೇ ಮಳೆ ಸುರಿಯುತ್ತಿರುವ ಕಾರಣ ಮಳೆಗಾಲದ ರೋಗಗಳ ಭೀತಿ ಶುರುವಾಗಿದ್ದು, ಜಿಲ್ಲೆಯಲ್ಲಿ ನಾಲ್ಕು ತಿಂಗಳಲ್ಲಿ 20 ಡೆಂಗ್ಯೂ, 1 ಚಿಕೂನ್ ಗುನ್ಯ ಹಾಗೂ 1 ಮಲೇರಿಯಾ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದ ಪರಿಣಾಮ ಜಿಲ್ಲೆಯಲ್ಲಿ ಮಳೆಗಾಲದ ರೋಗಗಳ ಹಾವಳಿ ಹೆಚ್ಚಾಗಿತ್ತು. 2024ರಲ್ಲಿ ಒಟ್ಟು 785 ಡೆಂಗ್ಯೂ ಹಾಗೂ 79 ಚಿಕೂನ್ ಗುನ್ಯ ಪ್ರಕರಣ ವರದಿಯಾಗಿತ್ತು. 2025ರಲ್ಲಿ ಜನವರಿಯಿಂದ ಮೇವರೆಗೆ 20 ಡೆಂಗ್ಯೂ, 1 ಚಿಕೂನ್ ಗುನ್ಯ, 1 ಮಲೇರಿಯಾ ಕೇಸ್ ಪತ್ತೆಯಾಗಿವೆ. ಜನವರಿಯಲ್ಲಿ 6, ಫೆಬ್ರವರಿಯಲ್ಲಿ 12, ಮಾರ್ಚ್‌ನಲ್ಲಿ 2 ಡೆಂಗ್ಯೂ ಕೇಸ್ ಕಾಣಿಸಿಕೊಂಡಿವೆ. ಮಳೆಗಾಲದಲ್ಲಿ ಮಳೆ ಸುರಿದ ನಂತರ ಪರಿಸರದಲ್ಲಿ ಗುಂಡಿ, ಚರಂಡಿ, ಮತ್ತಿತರ ಕಡೆಗಳಲ್ಲಿ ನೀರು ಸಂಗ್ರಹವಾಗಿ, ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ, ಈ ಕಾಯಿಲೆಗಳು ಹೆಚ್ಚಾಗುವ ಭೀತಿ ಕಾಡುತ್ತದೆ. ಈ ವರ್ಷವೂ ಬೇಸಿಗೆ ಅವಧಿಯಲ್ಲೇ ಹೆಚ್ಚಿನ ಪ್ರಮಾಣದ ಮಳೆ ಸುರಿಯುತ್ತಿರುವುದು ಸಾಂಕ್ರಾಮಿಕ ಕಾಯಿಲೆಗಳ ಉಲ್ಬಣ ಹೆಚ್ಚಾಗುವ ಆತಂಕ ಶುರುವಾಗಿದೆ. ಜಿಲ್ಲೆಯ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಎಲ್ಲೆಡೆ ಸೊಳ್ಳೆಗಳ ನಿಯಂತ್ರಣ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಜಿಲ್ಲಾ ಕೇಂದ್ರ ಹಾವೇರಿ ನಗರ, ಸೇರಿದಂತೆ ಇನ್ನೂ ಹಲವಡೆ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಕೊಳಚೆ ನೀರು ನಿಂತುಕೊಂಡಿದೆ. ಇದು ಸೊಳ್ಳೆಗಳ ಉತ್ಪತ್ತಿಗೆ ದಾರಿ ಮಾಡಿಕೊಡುತ್ತಿದೆ. 10, 15 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸುತ್ತಿರುವ ಕಾರಣ ಜನ ವಾರ, ಎರಡು ವಾರಗಟ್ಟಲೇ ಒಂದೇ ಕಡೆ ಜನ ನೀರು ಶೇಖರಿಸಿ ಇಡುತ್ತಿದ್ದಾರೆ. ಇದು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಇದರಿಂದ ಲಾರ್ವಾ ಸಮೀಕ್ಷೆಗೂ ತೊಂದರೆಯಾಗುತ್ತಿದೆ ಎಂಬುದು ಆರೋಗ್ಯ ಇಲಾಖೆ ಸಿಬ್ಬಂದಿ ಆರೋಪವಾಗಿದೆ. ಹಾಗಾಗಿ, ಸ್ಥಳೀಯ ಸಂಸ್ಥೆಗಳು ಈ ಬಗ್ಗೆಯೂ ಗಮನ ಹರಿಸಬೇಕಿದೆ.

ಟಾಸ್ಕ್ ಫೋರ್ಸ್ ಕಮಿಟಿ ಸಭೆ :

ಕಳೆದ ವರ್ಷದಂತೆ ಈ ವರ್ಷವೂ ಸಾಂಕ್ರಾಮಿಕ ರೋಗಭೀತಿ ಇದ್ದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಗತ್ಯ ಸೂಚನೆ ನಿಡಿದ್ದಾರೆ. ಪ್ರತಿ 15 ದಿನಕ್ಕೊಮ್ಮೆ ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ, ಅಂಗನವಾಡಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ತಂಡದಿಂದ ಲಾರ್ವಾ ಸರ್ವೆ ಮಾಡಲು ಹಾಗೂ ಜಾಗೃತಿ ಮೂಡಿಸಲು ಸೂಚಿಸಿದ್ದಾರೆ.

ಹೈರಿಸ್ಕ್ ಪ್ರದೇಶಗಳ ಮೇಲೆ ನಿಗಾ

ಕಳೆದ ವರ್ಷ ಹೆಚ್ಚಿ ಪ್ರಕರಣಗಳು ಕಂಡುಬಂದ ಪ್ರದೇಶಗಳು ಹಾಗೂ ರೋಗ ಖಚಿತಗೊಂಡಿರುವ ರೋಗಿಗಳ ಪಟ್ಟಿ ಮಾಡಲಾಗಿದೆ. ಆಯಾ ಪ್ರದೇಶಗಳಿಗೆ ಭೇಟಿ ನೀಡಿ, ಕಲೆದ ವರ್ಷ ಡೆಂಗ್ಯೂ, ಚಿಕೂನ್ ಗುನ್ಯ ದೃಢಪಟ್ಟಿರುವವರನ್ನು ಈ ವರ್ಷವೂ ಪರೀಕ್ಷೆಗೆ ಒಳಪಡಿಸಲಾಗುವುದು. ಎರಡನೇ ಬಾರಿ ಡೆಂಗ್ಯೂ ಕಾಣಿಸಿಕೊಂಡರೆ ಜೀವಹಾನಿ ಸಂಭವವಿದೆ. ಹಾಗಾಗಿ, ಈ ಬಾರಿ ಮೊದಲೇ ಅವರ ಮೇಲೆ ನಿಗಾ ಇಡಲು ಕ್ರಮ ಕೈಗೊಳ್ಳಲಾಗಿದೆ. ಪಾಸಿಟಿವ್ ಕೇಸ್ ಬಂದಲ್ಲಿ ಬೇವಿನ ಎಣ್ಣೆ ವಿತರಿಸಿ ಅದಕ್ಕೆ ಕೊಬ್ಬರಿ ಎಣ್ಣೆ ಸೇರಿಸಿ ಮುಖ, ಕೈಕಾಲುಗಳಿಗೆ ಹಚ್ಚಲು ಸೂಚಿಸಲಾಗುತ್ತಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸರಿತಾ ತಿಳಿಸಿದ್ದಾರೆ.

ಜಿಪಿಎಸ್ ಕಡ್ಡಾಯವಾಗಲಿ

ಸರ್ಕಾರ ಲಾರ್ವಾ ಸಮೀಕ್ಷೆಗೆ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಕೆಲವೆಡೆ ಮಾತ್ರ ಲಾರ್ವಾ ಸರ್ವೆ ಮಾಡಿ ಜಿಪಿಎಸ್ ಇಲ್ಲದ ಫೋಟೋ ತೋರಿಸಿ ಹಣ ವ್ಯಯಿಸುತ್ತಿದ್ದಾರೆ. ಇದು ರೋಗ ಹೆಚ್ಚಳಕ್ಕೆ ಕಾರಣವಾಗಿತ್ತು. ಈ ಕುರಿತು ಕಳೆದ ವರ್ಷ ‘ವಿಜಯವಾಣಿ’ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಲಾರ್ವಾ ಸಮೀಕ್ಷೆಗೆ ಜಿಪಿಎಸ್ ಕಡ್ಡಾಯಗೊಳಿಸುವಂತೆ ಆರೋಗ್ಯ ಇಲಾಖೆ ಆಯುಕ್ತರು ಆದೇಶಿಸಿದ್ದರು. ಈ ವರ್ಷ ಅದು ಕಡ್ಡಾಯವಾಗುವಂತೆ ಅಧಿಕಾರಿಗಳು ಗಮನಹರಿಸಬೇಕಿದೆ.

ಕೋಟ್:

ಸಾಂಕ್ರಾಮಿಕ ರೋಗಗಳ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಲೂಕಿಗೊಬ್ಬರು ಸೂಪ್ರವೈಸರ್ ನೇಮಿಸಲಾಗಿದ್ದು, ವಾರಕ್ಕೊಮ್ಮೆ ವರದಿ ಪರಿಶೀಲಿಸಲಾಗುತ್ತಿದೆ. ಎಲ್ಲೆಡೆ 15 ದಿನಕ್ಕೊಮ್ಮೆ ಲಾರ್ವಾ ಸರ್ವೆ, ಜನಜಾಗೃತಿ ಕಾರ್ಯ ಆರಂಭಿಸಲಾಗಿದೆ. 2022ರಲ್ಲಿ ಅಂಗನವಾಡಿಗಳಿಗೆ ಸೊಳ್ಳೆ ಪರದೆ ವಿತರಿಸಲಾಗಿದ್ದು, ಕಡ್ಡಾಯವಾಗಿ ಬಳಸಲು ಸೂಚಿಸಲಾಗಿದೆ. ಶಾಲೆ, ವಸತಿ ನಿಲಯ, ಜನವಸತಿ ಪ್ರದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

- ಡಾ.ಸರಿತಾ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net