

ಹಾವೇರಿ: ದೀಪಾವಳಿ ಹಟ್ಟಿ ಹಬ್ಬದ ದಿನವೇ ಕೊಬ್ಬರಿ ಹೋರಿಗಳು ಹಾಯ್ದು ಮೂವರು ದುರ್ಮರಣ ಹೊಂದಿದ ಪ್ರತ್ಯೇಕ ಮೂರು ಘಟನೆಗಳು ಜಿಲ್ಲೆಯಲ್ಲಿ ವರದಿಯಾಗಿವೆ.
ದೀಪಾವಳಿ ಹಬ್ಬದಿಂದ ಹೋರಿ ಹಬ್ಬ ಶುರುವಾಗಿದ್ದು, ಮೊದಲ ದಿನವೇ ಜಿಲ್ಲೆಯ ಮೂರು ಕಡೆಗೆ ಹೋರಿ ಹಬ್ಬ, ಎತ್ತಿನ ಮೆರವಣಿಗೆ ಸಂದರ್ಭದಲ್ಲಿ ಹೋರಿಗಳು ತಿವಿದು ಮೂವರು ಮೃತಪಟ್ಟಿದ್ದಾರೆ.
ಬುಧವಾರ ಹಾವೇರಿ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆ ಅಂಗವಾಗಿ ಹೋರಿ ಹಬ್ಬ ಆಯೋಜಿಸಲಾಗಿತ್ತು. ಈ ವೇಳೆ ಸ್ಪರ್ಧೆಯಲ್ಲಿ ಓಡಿದ ಹೋರಿಯೊಂದು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಇಲ್ಲಿನ ದಾನೇಶ್ವರಿನಗರ ನಿವಾಸಿ ಚಂದ್ರಶೇಖರ ಕೋಡಿಹಳ್ಳಿ (70) ಎಂಬುವರರಿಗೆ ತಿವಿದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಹಾನಗಲ್ಲ ತಾಲೂಕು ತಿಳವಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಹಟ್ಟಿ ಹಬ್ಬದ ಹೋರಿ ಸ್ಪರ್ಧೆಯಲ್ಲಿ ಹೋರಿ ತಿವಿದು ಗ್ರಾಮದ ಭರತ ರಾಮಪ್ಪ ಹಿಂಗಮೇರಿ (24) ಮೃತಪಟ್ಟಿದ್ದಾರೆ. ಹೋರಿ ಹಬ್ಬ ನೋಡಲು ಹೋಗಿದ್ದ ಭರತ ರೆಸ್ಟೋರೆಂಟ್ ಒಂದರ ಬಳಿ ನಿಂತಿದ್ದಾಗ ಓಡಿ ಬಂದ ಹೋರಿಯೊಂದು ತಿವಿದಿದೆ. ಈ ವೇಳೆ ತಲೆಗೆ ಬಿದ್ದ ಭರತನ ತಲೆಗೆ ತೀವ್ರ ಪೆಟ್ಟಾಗಿ, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ ಮೃತಪಟ್ಟಿದ್ದಾರೆ ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ ತಾಲೂಕು ದೇವಿಹೊಸೂರ ಗ್ರಾಮದಲ್ಲಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಎತ್ತುಗಳ ಮೆರವಣಿಗೆ ವೇಳೆ ಬೆದರಿ ಓಡಿದ ಒಂದು ಎತ್ತು ಹೊಂಡದ ಓಣಿಯ ಮನೆಯ ಕಟ್ಟಿಯ ಮೇಲೆ ಕುಳಿತಿದ್ದ ಘನಿಸಾಬ ಮಹಮ್ಮದ್ ಹುಸೇನ್ ಬಂಕಾಪುರ (75) ಎಂಬುವರಿಗೆ ಹೋರಿ ತಿವಿದು ಮೃತಪಟ್ಟಿದ್ದಾರೆ.