

ಹಾವೇರಿ: ದೀಪಾವಳಿ ಹಬ್ಬದ ಪ್ರಮುಖ ಘಟ್ಟ ಹಟ್ಟಿ ಲಕ್ಕವ್ವನ ಹಬ್ಬವನ್ನು ಜಿಲ್ಲೆಯಾದ್ಯಂತ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಮನೆಯಲ್ಲಿ ಸಗಣಿಯಿಂದ ಪಾಂಡವರನ್ನು ಪ್ರತಿಷ್ಠಾಪಿಸಿ, ದೀಪ ಹಚ್ಚಿ, ಪಟಾಕಿ ಸಿಡಿಸುವ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಣೆ ಮಾಡಲಾಯಿತು.
ಜಿಲ್ಲಾ ಕೇಂದ್ರ ಹಾವೇರಿ ನಗರ , ಗ್ರಾಮೀಣ ಭಾಗ ಸೇರಿ ಜಿಲ್ಲೆಯ ಎಲ್ಲೆಡೆ ಬೆಳಕಿನ ಹಬ್ಬದಾಚರಣೆ ಕಂಡು ಬಂತು. ಎಲ್ಲೆಡೆ ವಿದ್ಯುತ್ ದೀಪಾಲಂಕಾರ, ಮಣ್ಣಿನ ಹಣತೆಗಳು ಬೆಳಗಿದವು. ಮನೆಗಳು, ಅಂಗಡಿಗಳಲ್ಲಿ ಮಹಾಲಕ್ಷ್ಮೀ ಪೂಜೆ ಭರ್ಜರಿಯಾಗಿ ನಡೆಯಿತು. ಬಂದುಗಳಿಗೆ ಸಿಹಿ ತಿನಿಸು, ಉಡುಗೊರೆ ತಿನಿಸು ನೀಡಿ ಹಬ್ಬದ ಸಂಭ್ರಮ ಹೆಚ್ಚಿಸಲಾಯಿತು. ಗ್ರಾಮೀಣ ಭಾಗದಲ್ಲಿ ಹಟ್ಟಿ ಹಬ್ಬದ ಹೋರಿ ಬೆದರಿಸುವ ಸ್ಪರ್ಧೆ ಜರುಗಿತು.
ಮನೆ ಹಾಗೂ ಮನೆಯ ಹೊರಗೆ ಸಗಣಿಯಿಂದ ಹಟ್ಟಿ ಲಕ್ಕಮ್ಮನ ಆಕೃತಿಗಳನ್ನು ಮಾಡಿ ಹೂವಿನಿಂದ ಅಲಂಕರಿಸಿದ್ದರು. ಕಬ್ಬು, ಬಾಳೆಕಂಬಗಳನ್ನು ಇರಿಸಿ ಮಂಟಪ ನಿರ್ಮಿಸಿದ್ದರು. ಮನೆ ಮಂದಿಯೆಲ್ಲ ಸೇರಿ ಹಟ್ಟಿ ಲಕ್ಕಮ್ಮ ದೇವಿಗೆ ಪೂಜೆ ನೆರವೇರಿಸಿದರು. ಸಿಹಿ ಅಡುಗೆ ನೈವೇದ್ಯ ಮಾಡಿ, ಲಕ್ಷ್ಮೀ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಸಡಗರ ಹೆಚ್ಚಿತ್ತು. ಗ್ರಾಮದ ಜನರು, ಬೆಳಿಗ್ಗೆಯಿಂದಲೇ ಹಟ್ಟಿ ಲಕ್ಕಮ್ಮ ಪೂಜೆ ತಯಾರಿ ಶುರು ಮಾಡಿದರು. ಮನೆಯೊಳಗೆ ಹಾಗೂ ಜಾನುವಾರು ಕೊಟ್ಟಿಗೆಗಳಲ್ಲಿ ಸಗಣಿಯಿಂದ ಹಟ್ಟಿ ಲಕ್ಕಮ್ಮ ಪ್ರತಿಷ್ಠಾಪಿಸಿದ್ದರು. ಕಬ್ಬು, ಬಾಳೆ ಕಂಬ ಹಾಗೂ ವಿವಿಧ ಕೃಷಿ ಉತ್ಪನ್ನಗಳನ್ನು ಬಳಸಿ ಮಂಟಪ ಅಲಂಕರಿಸಿದ್ದರು. ಹೂವಿನಿಂದ ಶೃಂಗರಿಸಿದ್ದರು. ಮಕ್ಕಳು, ಹೊಸ ಬಟ್ಟೆಗಳನ್ನು ತೊಟ್ಟು ಹಬ್ಬದ ಮೆರುಗು ಹೆಚ್ಚಿಸಿದರು. ಮಹಿಳೆಯರು, ಮಕ್ಕಳು ದೀಪಗಳನ್ನು ಹಿಡಿದು ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು.
ಭರ್ಜರಿ ಭೋಜನ :
ಹೋಳಿಗೆ, ತುಪ್ಪ, ಕಡಬು, ಚಕ್ಕುಲಿ, ಕರ್ಚಿಕಾಯಿ, ಸೇರಿದಂತೆ ವಿವಿಧ ಸಹಿ ಪದಾರ್ಥಗಳು, ಚಕ್ಕಲಿ ಹಾಗೂ ವಿವಿಧ ತಿನಿಸುಗಳನ್ನು ತಯಾರಿಸಲಾಗಿತ್ತು. ಪೂಜೆಯ ನಂತರ ಕುಟುಂಬ ಸದಸ್ಯರು, ನೆಂಟರು ಸೇರಿ ಭರ್ಜರಿ ಭೋಜನ ಸವಿದರು.
ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಮಿಂದೆದ್ದ ಯುವಪಡೆ
ಹಾವೇರಿ ಶಹರ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹಟ್ಟಿ ಹಬ್ಬದ ಅಂಗವಾಗಿ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವಪಡೆ ಹೋರಿಗೆ ಕಟ್ಟಿದ್ದ ಕೊಬ್ಬರಿ ಹಿಡಿಯಲು ನಾ ಮುಂದು ತಾಮುಂದು ಎಂದು ಮುನ್ನುಗ್ಗಿದರು.
ರಾಣೆಬೆನ್ನೂರು ಕಾ ರಾಜಾ, ನೀಲಕಂಠ, ಹಾವೇರಿ ಕಾ ರಾಜಾ, ಸೇರಿದಂತೆ ವಿವಿಧ ಹೆಸರುಗಳ ಹೋರಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವು. ಕೊಬ್ಬಿದ ಹೋರಿಗಳನ್ನು ಕೆಣಕುತ್ತ ಯುವಕರು ಬೆನ್ನಟ್ಟುವ ದೃಶ್ಯ ರೋಚಕವಾಗಿತ್ತು.