

ಹಾವೇರಿ: ಮಳೆ ಬಾರದಿದ್ದಾಗ ಕಪ್ಪೆ, ಕತ್ತೆಗಳ, ಗೊಂಬೆಗಳ ಮದುವೆ ಮಾಡುವುದು ಸೇರಿದಂತೆ ವಿಭಿನ್ನ ಆಚರಣೆಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಈ ಸಾಲಿಗೆ ಮತ್ತೊಂದು ಆಚರಣೆ ಸೇರಿರುವುದು ಹಾವೇರಿಯಲ್ಲಿ ಬೆಳಕಿಗೆ ಬಂದಿದೆ. ಮಳೆ ಬರಲಿ ಎಂದು ಹೂತ ಶವಗಳನ್ನು ಹೊರ ತೆಗೆದು ಸುಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, 3.3 ಲಕ್ಷ ಹೆಕ್ಟೆರ್ ಭೂಮಿಯಲ್ಲಿ ರೈತರು ಬಿತ್ತನೆ ಮಾಡುತ್ತಾರೆ. ಇದರಲ್ಲಿ ಮಳೆಯಾಶ್ರಿತ ಬೆಳೆಯೇ ಹೆಚ್ಚು. ಕಳೆದ ವರ್ಷ ಬರ ಆವರಿಸಿತ್ತು. ಈ ವರ್ಷ ಭರವಸೆ ಮೂಡಿಸಿದ್ದ ಮುಂಗಾರು ಮಳೆ ಮತ್ಯಾಕೋ ಮುನಿಸಿಕೊಂಡಿದೆ. ಇದಕ್ಕೆ ವಿಜ್ಞಾನಿಗಳು, ಹವಾಮಾನ ತಜ್ಞರು ವೈಜ್ಞಾನಿಕ ಕಾರಣಗಳನ್ನು ಕೊಟ್ಟರೆ, ಗ್ರಾಮೀಣ ಭಾಗದ ಕೆಲವರು ಕೊಡುವ ವ್ಯಾಖ್ಯಾನವೇ ಬೇರೆ.
ಚರ್ಮ ಖಾಯಿಲೆ (ತೊನ್ನು ರೋಗ)ಯಿಂದ ಬಳಲಿ, ಮರಣ ಹೊಂದಿದವವರ ದೇಹವನ್ನು ಮಣ್ಣಿನಲ್ಲಿ ಹೂಳದೇ ಸುಟ್ಟು ಹಾಕಬೇಕು. ಒಂದು ವೇಳೆ ಸುಡದೇ ಮಣ್ಣಿನಲ್ಲಿ ಹೂತು ಹಾಕಿದರೆ ಮಳೆ ಬರುವುದಿಲ್ಲ. ಮಳೆ ಆಗಬೇಕೆಂದರೆ, ವಾಪಸ್ ಆ ಶವಗಳನ್ನು ತೆಗೆದು ಸುಡ್ಡು ಹಾಕಿದರೆ ಮಳೆಯಾಗುತ್ತದೆ ಎಂಬುದು ಕೆಲ ಜನರ ನಂಬಿಕೆಯಾಗಿದೆ.
ಈ ನಂಬಿಕೆಯಿಂದಲೇ ಹಾವೇರಿಯ ಇಜಾರಿ ಲಕಮಾಪುರ, ಹೆಗ್ಗೇರಿ, ಗ್ರಾಮಾಂತರ ಪ್ರದೇಶ ಸೇರಿದಂತೆ ಕೆಲವೆಡೆ ಚರ್ಮ ರೋಗದಿಂದ ಬಳಲಿ ಮೃತಪಟ್ಟ ಐದಾರು ಜನರ ಶವಗಳನ್ನು ಮಣ್ಣಿನಿಂದ ಹೊರತೆಗೆದು ಮತ್ತೊಮ್ಮೆ ಕಟ್ಟಿಗೆಯಲ್ಲಿ ಹಾಕಿ ಸುಟ್ಟು ಹಾಕಿದ್ದಾರೆ ಎಂದು ಇಜಾರಿ ಲಕಮಾಪುರದ ವ್ಯಕ್ತಿಯೊಬ್ಬರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಬೆಳಕಿಗೆ ಬರಲ್ಲ
ಇಂತಹ ಪದ್ಧತಿ ರಾಜ್ಯದ ನಾನಾ ಭಾಗದಲ್ಲಿ ಇದೆ. ಆದರೆ, ಇದು ಬೆಳಕಿಗೆ ಬರುವುದಿಲ್ಲ. ಸದ್ದಿಲ್ಲದೇ ಕೆಲವರು ಇಂತಹ ಆಚರಣೆ ಮಾಡಿಬಿಡುತ್ತಾರೆ. ಅವರ ನಂಬಿಕೆಯೇ ಇದಕ್ಕೆ ಕಾರಣ ಎಂಬುದು ಗಮನಾರ್ಹ ಅಂಶವಾಗಿದೆ.