ವಿದ್ಯಾರ್ಥಿಗಳಿಗೆ ರಾಜಪುರೋಹಿತರ ಸಂಶೋಧನೆ ಮಾರ್ಗದರ್ಶಿ; ಡಿ.ಡಿ.ಪಿ.ಯು. ಡಾ.ಉಮೇಶಪ್ಪ ಎಚ್.

18 HVR 5
Published on

ಹಾವೇರಿ: ಸಂಶೋಧನಾ ಕ್ಷೇತ್ರದಲ್ಲಿ ಸಂಶೋಧಕ ನಾ.ರಾಜಪುರೋಹಿತರು ಮಾಡಿದ ಸಾಧನೆ ಇಂದಿನ ಇತಿಹಾಸ ಮತ್ತು ಸಾಹಿತ್ಯಾಸಕ್ತರಿಗೆ, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಉಮೇಶಪ್ಪ ಎಚ್. ಹೇಳಿದರು
ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಗಳಗನಾಥ ಮತ್ತು ನಾ.ರಾಜಪುರೋಹಿತ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ನಾ.ರಾಜಪುರೋಹಿತರ 137ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಮೋದ ನಲವಾಗಲ ಮಾತನಾಡಿ, ಕರ್ನಾಟಕದ ಬಗೆಗೆ ಮರಾಠಿ ವಿದ್ವಾಂಸರು ಸೃಷ್ಟಿಸಿದ ತಪ್ಪು ಗ್ರಹಿಕೆಗಳನ್ನು ರಾಜಪುರೋಹಿತರು ಬರೆದ ಕೃತಿಗಳು ಹೊಡೆದು ಹಾಕಿವೆ. ಇವರ ಕೃತಿಗಳು ಕರ್ನಾಟಕದ ಪ್ರಾಚೀನತೆ, ಹಿರಿಮೆಯನ್ನು ತೋರಿಸುವುದಲ್ಲದೇ ಆಧಾರ ಸಹಿತ ಸಂಶೋಧನಾತ್ಮಕ ಮಹತ್ವಾಕಾಂಕ್ಷಿ ಕೃತಿಗಳಾಗಿವೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ದುಷ್ಯಂತ ನಾಡಗೌಡ ಮಾತನಾಡಿ, ರಾಜಪುರೋಹಿತರ ಮಹತ್ವದ ಸಂಶೋಧನೆಗಳು ಕರ್ನಾಟಕದ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಒಳಗೊಂಡಿವೆ. ಅವರನ್ನು ಅಭ್ಯಸಿಸುವವರಿಗೆ ಅವರ ಕೃತಿಗಳು ಅವರು ಸಂಶೋಧನೆಗೆ ನೀಡಿರುವ ಮಹತ್ವವನ್ನು ಮನದಟ್ಟು ಮಾಡುತ್ತವೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಗಳಗನಾಥರ ಹಾಗೂ ರಾಜಪುರೋಹಿತರ ಭಾಷಾಭಿಮಾನ, ಸ್ವಾಭಿಮಾನ, ದೇಶಾಭಿಮಾನ ನಮ್ಮೆಲ್ಲರಿಗೆ ಸ್ಪೂರ್ತಿ, ಪ್ರೇರಣೆಯಾಗುತ್ತದೆ. ಅವರ ಅರಿವೇ ಅವರಿಗೆ ಗುರುವಾಗಿತ್ತು ಎಂದು ನುಡಿದರು.
ಪ್ರತಿಷ್ಠಾನದ ಸದಸ್ಯ ಹನುಮಂತಗೌಡ ಗೊಲ್ಲರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಮಂಜುನಾಥ ವಡ್ಡರ, ಪ್ರತಿಷ್ಠಾನದ ಸದಸ್ಯರಾದ ಎ.ಎಂ. ಮುಲ್ಲಾ, ವೆಂಕಟೇಶ ಗಳಗನಾಥ, ಇತರರು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net