

ಹಾವೇರಿ: ಮೇ 31ರಂದು ಶಾಲೆಗಳು ಪ್ರಾರಂಭವಾಗಲಿದ್ದು, ಶಾಲಾ ಪ್ರಾರಂಭೋತ್ಸವವನ್ನು ಶಿಕ್ಷಕರು ಹಬ್ಬದಂತೆ ಆಚರಿಸಬೇಕು. ಅಂದು ಮಕ್ಕಳಿಗೆ ಸಿಹಿ ಭೋಜನ ನೀಡಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ) ಸುರೇಶ ಹುಗ್ಗಿ ಕರೆ ನೀಡಿದರು.
ಇಲ್ಲಿನ ಗುರುಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲೆಯ ಎಲ್ಲ ಪ್ರಾಥಮಿಕ ಶಾಲೆಗಳ ಶಾಲಾ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಲಾಖೆಯಿಂದ ಪೂರೈಸಿದ ಪಠ್ಯಪುಸ್ತಕ, ಸಮವಸ್ತ್ರಗಳನ್ನು ಮಕ್ಕಳಿಗೆ ಸರಿಯಾಗಿ ತಲುಪಿಸಬೇಕು. ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ತಮ್ಮಲ್ಲಿರುವ ತಂತ್ರಜ್ಞಾನವನ್ನು ಗುಣಾತ್ಮಕ ಶಿಕ್ಷಣಕ್ಕೆ ವಿನಿಯೋಗಿಸಿ ಶೈಕ್ಷಣಿಕ ಮಟ್ಟವನ್ನು ಎತ್ತರಿಸಬೇಕು. ಮಕ್ಕಳಲ್ಲಿ ಸಾಕ್ಷರತೆ ಹಾಗೂ ಸಂಖ್ಯಾಶಾಸ್ತ್ರದ ಮೂಲಕ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು ಎಂದು ಹೇಳಿದರು.
ಡಯಟ್ ಪ್ರಾಚಾರ್ಯ ಗಿರೀಶ ಪದಕಿ ಮಾತನಾಡಿ, ಒಂದರಿಂದ ಮೂರನೇ ತರಗತಿ ನಲಿಕಲಿ ತರಗತಿಗಳಾಗಿದ್ದು, ಈ ಹಂತದಲ್ಲಿ ಕಲಿಕೆಯು ದೃಢವಾಗಬೇಕು. ನಲಿಕಲಿ ತರಗತಿಗಳು ವೈಭವವನ್ನು ಕಾಣಬೇಕು. ತರಗತಿಗಳಲ್ಲಿ ಕಲಿಕಾ ಫಲಗಳ ಮೂಲಕ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಈ ವರ್ಷ ಡಯಟ್‌ನಿಂದ ನೀಡಬೇಕಾದ ತರಬೇತಿಗಳನ್ನು ಮುಂಚಿತವಾಗಿ ತಿಳಿಸಲಾಗುವುದು. ಆ ತರಬೇತಿಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು. ಶಾಲಾ ಅವಧಿಗಳನ್ನು ಉತ್ತಮವಾಗಿ ಉಪಯೋಗಿಸಿಕೊಂಡು ಶಿಕ್ಷಕರು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಚಳ್ಳಾಳ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕೆ ಸಂಘ ಕೂಡ ಸದಾ ಸಿದ್ಧವಾಗಿದೆ. ಶಿಕ್ಷಕರ ಕೊರತೆಯನ್ನು ನೀಗಿಸಲು ಅತಿಥಿ ಶಿಕ್ಷಕರನ್ನು ಆದಷ್ಟು ಬೇಗ ನೇಮಿಸಬೇಕು. ಎಲ್ಲ ತಾಲೂಕುಗಳಲ್ಲಿ ಗುರುಸ್ಪಂದನ ಕಾರ್ಯಕ್ರಮ ಏರ್ಪಡಿಸುವ ಮೂಲಕ ಶಿಕ್ಷಕರು ತಮ್ಮ ತಮ್ಮ ಸೇವಾ ಪುಸ್ತಕಗಳನ್ನ ನೋಡಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಹಾವೇರಿ ಬಿಇಒ ಮೌನೇಶ ಬಡಿಗೇರ, ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಾಧಿಕಾರಿಗಳು, ಅಕ್ಷರ ದಾಸೋಹದ ಅಧಿಕಾರಿಗಳು, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಇತರರು ಪಾಲ್ಗೊಂಡಿದ್ದರು.