

ಹಾವೇರಿ: ಉರ್ದು ಶಾಲೆಗಳ ಬಲವರ್ಧನೆ ಮತ್ತು ಸಬಲಿಕರಣಕ್ಕೆ ಡಯಟ್ ಹಾವೇರಿಯ ಎಲ್ಲ ಅಧಿಕಾರಿಗಳು ಪ್ರಯತ್ನಿಸುತ್ತಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ಡಯಟ್ ಪ್ರಾಂಶುಪಾಲ ಗಿರೀಶ ಪದಕಿ ಕಿವಿಮಾತು ಹೇಳಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ನಗರದ ಬಸವೇಶ್ವರ ಬಿಎಡ್ ಕಾಲೇಜ್‌ನಲ್ಲಿ ಶನಿವಾರ ಆಯೋಜಿಸಿದ್ದ ಹಾವೇರಿ ವಿಭಾಗದ ಬ್ಯಾಡಗಿ, ಹಾವೇರಿ, ಹಿರೇಕೆರೂರ, ರಾಣೆಬೆನ್ನೂರ ತಾಲೂಕಿನ 136 ಉರ್ದು ನಲಿಕಲಿ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕಾರ್ಯಾಗಾರ ಉದ್ಘಾಟಿಸಿದ ಡಿಡಿಪಿಐ ಸುರೇಶ ಹುಗ್ಗಿ ಮಾತನಾಡಿ, ನಲಿಕಲಿ ಕಲಿಕೆಯು ಆರಂಭಿಕ ತರಗತಿಗಳಿಗೆ ಭದ್ರ ಬುನಾದಿಯಾಗಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಹೇಳಿದರು.
ಜಿಲ್ಲಾ ಉರ್ದು ಶಿಕ್ಷಣ ಸಂಯೋಜಕ ಸಿಕಂದರ್ ಮುಲ್ಲಾ ಮಾತನಾಡಿ, ರಾಜ್ಯದಲ್ಲಿ ಪ್ರಥಮವಾಗಿ ಉರ್ದು ನಲಿಕಲಿ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರ ಆಯೋಜಿಸಿದ ಹೆಮ್ಮೆ ಹಾವೇರಿ ಡಯಟ್ ಪ್ರಾಂಶುಪಾಲರಾದ ಗಿರೀಶ ಪದಕಿ ಅವರ ತಂಡಕ್ಕೆ ಸಲ್ಲುತ್ತದೆ ಎಂದರು.
ಉಪನ್ಯಾಸಕರಾದ ವಿಜಯಾ ಪಾಟೀಲ, ಮಂಜುಳಾ ಚಂದ್ರಗಿರಿ, ತರಬೇತುದಾರರಾದ ಹಿದಾಯತವುಲ್ಲಾ, ಖಾಲಿದ್ ಖಾನ್ ತರಬೇತಿ ನೀಡಿದರು.
ಡಯಟ್ ಉಪನ್ಯಾಸಕಿ ಕವಿತಾ ಮಠದ, ಡಯಟ್ ತಾಂತ್ರಿಕ ಸಹಾಯಕ ಎಂ.ಕೆ.ಹಿರೇಮಠ, ಜಿಲ್ಲಾ ಉರ್ದು ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಬಿ.ಕುಂದಗೋಳ, ಎಂ.ಎ.ಅಕ್ಕಿ, ಇಸ್ಮಾಯಿಲ್ ತಡಕನಹಳ್ಳಿ, ಸುಹೀಲ್ ರಟ್ಟೀಹಳ್ಳಿ, ಲಿಯಾಖತ್ ಅಲಿ, ಅಸದುಲ್ಲಾ, ಮತ್ತಿತರರು ಹಾಜರಿದ್ದರು.