ಹಾವೇರಿ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಹತ್ತಿರದ ಗ್ರಾಮ ಓನ್ ಕೇಂದ್ರ ಹಾಗೂ ಕರ್ನಾಟಕ ಓನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು 2023ರಲ್ಲಿ ಹಾಗೂ 2024ರಲ್ಲಿ ಪದವಿ/ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮ ಉತ್ತೀರ್ಣರಾಗಿ, ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವ-ಉದ್ಯೋಗ ಹೊಂದಿಲ್ಲದವರು, ಮತ್ತು ಉನ್ನತ ವ್ಯಾಸಂಗ ಮುಂದುವರೆಸದೆ ಇರುವವರು ಹಾಗೂ ಕರ್ನಾಟಕದಲ್ಲಿ ಕನಿಷ್ಠ ಆರು ವರ್ಷ ವಾಸವಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಕಡ್ಡಾಯವಾಗಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆ ಹೊಂದಿರಬೇಕು. ಈ ಅರ್ಹತೆ ಹೊಂದಿರುವವರಿಗೆ ಪಲಿತಾಂಶದ ದಿನಾಂಕದಿಂದ 180 ದಿನಗಳ ನಂತರ ಪದವಿದರರಿಗೆ ಪ್ರತಿ ತಿಂಗಳು 3,000 ರೂ. ಹಾಗೂ ಡಿಪ್ಲೋಮ ಪಡೆದವರಿಗೆ 1,500 ರೂ. ನೇರ ನಗದು ವರ್ಗಾವಣೆ ಮೂಲಕ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಮೊದಲ ಕಂತಿನ ಹಣ ಪಾವತಿಯಾದ ನಂತರ ಪ್ರತಿ ತಿಂಗಳು 25ರೊಳಗಾಗಿ ಸ್ವಯಂ ಘೋಷಣೆ ಮಾಡುವುದು ಕಡ್ಡಾಯವಾಗಿದ್ದು, ಸೇವಾ ಸಿಂಧು ಪೋರ್ಟಲ್ (https://sevasindhuservices.karnataka.gov.in/)ನಲ್ಲಿ ಸ್ವಯಂಘೋಷಣೆ ಮಾಡಿ ಸ್ವೀಕೃತಿ ಪಡೆಯುವುದು ಅಗತ್ಯವಾಗಿರುತ್ತದೆ.
ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿರುವವರು ಸೇವಾ ಸಿಂಧು ಪೋರ್ಟಲ್‌ನಲ್ಲಿ ತಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿಕೊಂಡು ರಹವಾಸಿ ಪರಿಶೀಲನೆ ಬಾಕಿ ಇದ್ದಲ್ಲಿ ಮೂಲ ದಾಖಲೆಗಳೊಂದಿಗೆ ಸಂಬಂಧಿತ ಕಚೇರಿಗೆ ಭೇಟಿ ನೀಡಿ ರಹವಾಸಿ ಪರಿಶೀಲಿಸಿ ದೃಡೀಕರಿಸಿಕೊಳ್ಳಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಡಳಿತ ಭವನ, ಹಾವೇರಿ ಇಲ್ಲಿಗೆ ಸಂಪರ್ಕಿಸಬಹುದು ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.