ಹಾವೇರಿ: ನಗರದ ಗುತ್ತಲ ರಸ್ತೆಯಲ್ಲಿರುವ ಎ.ಪಿ.ಎಂ.ಸಿ ಉಗ್ರಾಣದಲ್ಲಿದ್ದ ರಾಜ್ಯ ಚುನಾವಣಾ ಆಯೋಗದ ಮತಪೆಟ್ಟಿಗೆಗಳನ್ನು ಹಾನಿ ಮತ್ತು ಕಳ್ಳತನಕ್ಕೆ ಪ್ರಯತ್ನ ಮಾಡಿರುವ ವಿಷಯವನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ತನಿಖೆ ಕೈಗೊಂಡಿದ್ದು ತಪ್ಪಿಸ್ಥರ ಮಾಹಿತಿ ಲಭ್ಯವಾದ ತಕ್ಷಣ ಯಾರೇ ಆಗಲಿ ಅತೀ ಕಠಿಣ ಶಿಕ್ಷೆಗೆ ಒಳಪಡಿಸಿ ಕಾನೂನಿನ ಪ್ರಕಾರ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದಿಂದ ಹಂಚಿಕೆಯಾದ ಮತಪೆಟ್ಟಿಗೆಗಳನ್ನು ಹಾವೇರಿ ತಹಸೀಲ್ದಾರರು ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ-2020ರ ಚುನಾವಣೆ ಮುಕ್ತಾಯದ ನಂತರ ಒಟ್ಟು ಲಭ್ಯವಿರುವ 621 ಮತಪೆಟ್ಟಿಗೆಗಳ ಪೈಕಿ 41 ಮತಪೆಟ್ಟಿಗೆಗಳನ್ನು ತಹಸೀಲ್ದಾರ್ ಕಚೇರಿಯಲ್ಲಿ ಮತ್ತು 580 ಮತಪೆಟ್ಟಿಗೆಗಳನ್ನು ಹಾವೇರಿ ಶಹರದ ಗುತ್ತಲ ರಸ್ತೆಯಲ್ಲಿರುವ ಎ.ಪಿ.ಎಂ.ಸಿ ಉಗ್ರಾಣದಲ್ಲಿ ಶೇಖರಿಸಿಟ್ಟಿದ್ದರು. ಯಾರೋ ಕಿಡಗೇಡಿಗಳು ಬಾಗಿಲನ್ನು ಮುರಿದು ಸಂಗ್ರಹಿಸಿಟ್ಟಿರುವ ಒಟ್ಟು 580 ಮತಪೆಟ್ಟಿಗೆಗಳಲ್ಲಿ ಖಾಲಿ ಇರುವ 10 ಮತಪೆಟ್ಟಿಗೆಗಳನ್ನು ಕಳ್ಳತನ ಮಾಡಿ ಕೊಂಡೊಯ್ಯಲು ಪ್ರಯತ್ನಿಸಿರುವ ವಿಷಯ ಗುರುವಾರ ಬೆಳಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಕಳ್ಳತನ ಮಾಡಿರುವ ರಾಜ್ಯ ಚುನಾವಣಾ ಆಯೋಗದ 10 ಮತಪೆಟ್ಟಿಗೆಗಳನ್ನು ಎ.ಪಿ.ಎಂ.ಸಿ ಉಗ್ರಾಣದ ಹತ್ತಿರಿರುವ ಯತ್ತಿನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ನೂತನ ಲೇಔಟ್‌ನ ಚರಂಡಿಯಲ್ಲಿ ಬಿಟ್ಟು ಹೋಗಿದ್ದಾರೆ. ಈ ಕುರಿತು ಪರಿಶೀಲಿಸಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.