

ಹಾವೇರಿ: ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಸೇವಾ ವಲಯ, ಉತ್ಪಾದನೆ ವಲಯಗಳಂತೆ ಪ್ರವಾಸೋದ್ಯಮ ವಲಯವು ಕೂಡ ಸಾಕಷ್ಟು ಆದಾಯವನ್ನು ತಂದುಕೊಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎ.ನಾಗರಾಜ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶಾದ್ಯಾಂತ ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದೆ ಎಂದರು.
ಫ್ರಾನ್ಸ್ ಹಾಗೂ ಅರಬ್ ರಾಷ್ಟ್ರಗಳು ಪ್ರವಾಸೋದ್ಯಮದಲ್ಲಿ ಸಾಕಷ್ಟು ಬೆಳವಣಿಗೆ ಹೊಂದಿವೆ. ಜಗತ್ತಿನ ಮುಕ್ಕಾಲು ಭಾಗದಷ್ಟು ಜನರು ಪ್ರವಾಸೋದ್ಯಮನ್ನು ವೀಕ್ಷಿಸಲು ಇಲ್ಲಿಗೆ ಹೋಗುತ್ತಾರೆ. ಇರಿಂದ ಆ ದೇಶಗಳ ಆರ್ಥಿಕತೆಯ ಬೆಳವಣಿಗೆಗೆ ಸಹಾಯಕಾರಿಯಾಗಿದೆ. ನಮ್ಮ ದೇಶದಲ್ಲಿ ಕೂಡ ಪ್ರವಾಸೋದ್ಯಮ ಅಭಿವೃದ್ಧಿ ಕಡೆಗೆ ಹೆಚ್ಚು ಒತ್ತು ನೀಡುವ ಅವಶ್ಯಕತೆ ಇದೆ. ಭಾರತವು ಬೌಗೋಳಿಕವಾಗಿ ಶ್ರೀಮಂತವಾಗಿದೆ. ಇಲ್ಲಿ ಪ್ರವಾಸೋದ್ಯಮಕ್ಕೆ ಬೇಕಾದ ಎಲ್ಲ ಸಂಪನ್ಮೂಲಗಳು ಹೇರಳವಾಗಿವೆ. ಅವುಗಳ ಅಭಿವೃದ್ಧಿ ಕಡೆಗೆ ಗಮನ ಹರಿಸಿದರೆ ಭಾರತವು ಕೂಡ ಪ್ರವಾಸೋದ್ಯಮದಲ್ಲಿ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದರು.
ಕೇವಲ ಪ್ರೇಕ್ಷಣಿಯ ಸ್ಥಳಗಳನ್ನು ಅಭಿವೃದ್ಧಿ ಪಡಿಸಿದರೆ ಎಲ್ಲವೂ ಸರಿ ಹೋಗುವುದಿಲ್ಲ. ಸಾರ್ವಜನಿಕರಿದಲೂ ಅಷ್ಟೇ ಸಹಕಾರ ಬೇಕಾಗುತ್ತದೆ. ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿನ ಪ್ರದೇಶವನ್ನು ಹಾಳುಮಾಡದೆ ಅದನ್ನು ರಕ್ಷಿಸುವ ಕೆಲಸ ಆಗಬೇಕು ಎಂದರು.
ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಚಾಲುಕ್ಯರು ಹಾಗೂ ಕದಂಬರ ಕಾಲದ ಕೆಲವು ದೇವಸ್ಥಾನಗಳಿವೆ. ಅವುಗಳ ಉಳಿವಿಗೆ ಪ್ರಯತ್ನಿಸಬೇಕು. ಆ ದೇವಸ್ಥಾನಗಳ ಮಹತ್ವ ಅಲ್ಲಿನ ಗ್ರಾಮಸ್ಥರಿಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಈ ದಿಸೆಯಲ್ಲಿ ಗ್ರಾಮಸ್ಥರಿಗೆ ಅರಿವು ಮೂಡಿಸಿ ಆ ಕಾಲದ ದೇವಸ್ಥಾನಗಳನ್ನು ರಕ್ಷಿಸಬೇಕು ಎಂದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಬಂಡು ಸುರೇಶ ಕೆಂಪವಾಡೆ ವಿಶೇಷ ಉಪನ್ಯಾಸ ನೀಡಿದರು.
ನಗರ ಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗೆಣ್ಣಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ಶಂಕರ ಸುತಾರ, ಪ್ರಾಚಾರ್ಯರಾದ ಡಾ.ಬಸಪ್ಪ ಚಳಕೊಪ್ಪ, ಡಾ.ಮೃತ್ಯುಂಜಯ ಎಂ.ಎಂ., ವಿದ್ಯಾರ್ಥಿಗಳು ಉಪಸ್ಥಿತರಿದ್ದರು.