

ಹಾವೇರಿ: ವಿಧಾನಸಭಾ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025, ಅರ್ಹತಾ ದಿನಾಂಕ 01-01-2025ಕ್ಕೆ ಸಂಬಂಧಿಸಿದಂತೆ ಮಂಗಳವಾರ ಜಿಲ್ಲೆಯಾದ್ಯಂತ (83-ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ) ಕರಡು ಮತದಾರರ ಪಟ್ಟಿಯನ್ನು ಎಲ್ಲ ಮತಗಟ್ಟೆಗಳು, ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು, ತಹಸೀಲ್ದಾರ್ ಕಾರ್ಯಾಲಯ, ಉಪ ವಿಭಾಗಾಧಿಕಾರಿಗಳ ಕಾರ್ಯಾಲಯ ಮತ್ತು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಈ ಕರಡು ಮತದಾರರ ಪಟ್ಟಿಗಳಲ್ಲಿ ಸಾರ್ವಜನಿಕರು ತಮ್ಮ ಹೆಸರು ಇರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ ಅರ್ಹತಾ ದಿನಾಂಕಕ್ಕೆ ಸಂಬಂಧಿಸಿದಂತೆ ಯುವಕರು/ಯುವತಿಯರು ಅಥವಾ ಸಾರ್ವಜನಿಕರು ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ-6ರಲ್ಲಿ, ಹೆಸರು ಕಡಿಮೆಗೊಳಿಸಲು ನಮೂನೆ-7ರಲ್ಲಿ, ಹೆಸರು, ಲಿಂಗ ಇತ್ಯಾದಿ ತಿದ್ದುಪಡಿ ಹಾಗೂ ಹೆಸರು ವರ್ಗಾವಣೆ ಬಯಸಿದ್ದಲ್ಲಿ ನಮೂನೆ-8ರಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಂಬಂಧ ಪಟ್ಟ ಮತಗಟ್ಟೆ ಅಧಿಕಾರಿ (ಬಿ.ಎಲ್.ಓ) ರವರಿಗೆ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ದಿನಾಂಕ 29-10-2024ರಿಂದ 28-11-2024ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.
ಹಕ್ಕು ಮತ್ತು ಆಕ್ಷೇಪಣೆ ಸಮಯದಲ್ಲಿ ವಿಶೇಷ ಅಭಿಯಾನ ದಿನಗಳನ್ನು 09-11-2024, 10-11-2024, 23-11-2024 ಹಾಗೂ 24-11-2024ರಂದು ಹಮ್ಮಿಕೊಳ್ಳಲಾಗಿದೆ. ಅರ್ಹ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಮನೆಯಿಂದಲೇ ವೋಟರ್ ಹೆಲ್ಪ್‌ಲೈನ್ ಅಥವಾ ವೋಟರ್ ಪೋರ್ಟಲ್ ಮೂಲಕ ಅರ್ಜಿ ದಾಖಲಿಸಬಹುದು.
ಈ ಅವಧಿಯಲ್ಲಿ ಸ್ವೀಕರಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ 24-12-2024ರಂದು ಕಾಲೋಚಿತಗೊಳಿಸಲಾಗುವುದು. ನಂತರ ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ 06-01-2025ರಂದು ಜಿಲ್ಲೆಯಾದ್ಯಂತ ಪ್ರಕಟಿಸಲಾಗುವುದು ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.