

ಹಾವೇರಿ: ನಗರದ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳು ಹಾಗೂ ದಾಸ್ತಾನು ಗೋಡೌನ್‌ಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಾಹಂತೇಶ ದಾನಮ್ಮನವರ ಶುಕ್ರವಾರ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಿಯಮಬದ್ಧವಾಗಿ ಗೊಬ್ಬರ ಮಾರಾಟ ಮಾಡುವಂತೆ ಸೂಚಿಸಿದರು.
ಬೆಳಗ್ಗೆ ನಗರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ರೈತರಿಗೆ ರಿಯಾಯ್ತಿ ದರದಲ್ಲಿ ವಿತರಿಸುವ ಪರಿಕರಗಳ ಕುರಿತು ಮಾಹಿತಿ ಪಡೆದರು. ನಂತರ ಅಧಿಕಾರಿಗಳೊಂದಿಗೆ ನಗರದ ರಸಗೊಬ್ಬರ ಮಾರಾಟಗಾರ ಮೃತ್ಯುಂಜಯ ಅಗ್ರೋ ಕೇಂದ್ರ ಹಾಗೂ ಮಹೇಶ ಟ್ರೇಡರ್ಸ್ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದರು.
ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಯಡಿ ವಿತರಿಸುವ ರಸಗೊಬ್ಬರಗಳನ್ನು ಕಡ್ಡಾಯವಾಗಿ ಪಿಒಎಸ್ ಯಂತ್ರದ ಮೂಲಕ ರೈತರ ಆಧಾರ್ ಸಂಖ್ಯೆ ಬಳಸಿ ಬಯೋಮೆಟ್ರಿಕ್ ಅಥವಾ ಮೊಬೈಲ್ ಒಟಿಪಿ ಸಂಖ್ಯೆಯನ್ನು ದೃಢೀಕರಿಸಿ ಮಾರಾಟ ಮಾಡಬೇಕು ಎಂದು ಮಾರಾಟಗಾರರಿಗೆ ಸೂಚಿಸಿದರು. ಭೌತಿಕ ದಾಸ್ತಾನು ವ್ಯತ್ಯಾಸವಿದ್ದಲ್ಲಿ ಕ್ರಮ ಜರುಗಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ರಸಗೊಬ್ಬರ ದಾಸ್ತಾನು ಗೋದಾಮುಗಳಿಗೆ ಭೇಟಿ ನೀಡಿ, ವಿವಿಧ ಕಂಪನಿಗಳ ವಿವಿಧ ಗ್ರೇಡ್‌ಗಳ ರಸಗೊಬ್ಬರಗಳ ದಾಸ್ತಾನು ತಪಾಸಣೆ ನಡೆಸಿದರು. ಯೂರಿಯಾ, ಡಿಎಪಿ, ಎಂಒಪಿ, ಹಾಗೂ ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರಗಳು ದಾಸ್ತಾನಿದ್ದು, ಜತೆಗೆ ಲಘು ಪೋಷಕಾಂಶಗಳಾದ ಜಿಂಕ್ ಸಲ್ಪೇಟ್, ಕ್ಯಾಲ್ಷಿಯಂ ಮೇಗ್ನಿಷಿಯಂ ಸಲ್ಪೇಟ್, ಗಂಧಕ, ಬೋರಾನ್, ಬೇವಿನ ಹಿಂಡಿ ಗೊಬ್ಬರ ಹಾಗೂ ಇತರೆ ಅವಶ್ಯಕ ಕೃಷಿ ಪರಿಕರಗಳನ್ನು ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಮಾಡಿರುವುದನ್ನು ಪರಿಶೀಲಿಸಿದರು.
ಜಂಟಿ ಕೃಷಿ ನಿರ್ದೇಶಕ ಡಾ.ಮಲ್ಲಿಕಾರ್ಜುನ ಕೆ., ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ.ಬಿ.ಎಚ್., ಕೃಷಿ ಅಧಿಕಾರಿ ಬಸನಗೌಡ ಪಾಟೀಲ, ಇತರರು ಹಾಜರಿದ್ದರು.
ಭಾರತ್ ಬ್ರ್ಯಾಂಡ್‌ನ ರಸಗೊಬ್ಬರಗಳು :
ಸರ್ಕಾರದ ನಿರ್ದೇಶನದಂತೆ ವಿವಿಧ ಕಂಪನಿಗಳ ಸಬ್ಸಿಡಿ ರಸಗೊಬ್ಬರಗಳು ಈಗ ಭಾರತ್ ಬ್ರ್ಯಾಂಡ್ ನಡಿ ಮಾರಾಟ ಮಾಡಲಾಗುತ್ತಿದೆ. ರಸಗೊಬ್ಬರಗಳ ಚೀಲಗಳ ಮೇಲೆ ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ 10:26:26 ಹೀಗೆ ವಿವಿಧ ಗ್ರೇಡ್ ಗಳ ರಸಗೊಬ್ಬರಗಳು ಈಗ ಭಾರತ್ ಬ್ರ್ಯಾಂಡ್‌ನಡಿ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ನೀಡುವ ಸಬ್ಸಿಡಿ ಮೊತ್ತ ಹಾಗೂ ಎಂ.ಆರ್.ಪಿ ಬೆಳೆಗಳನ್ನು ಪ್ರತಿ ಚೀಲಗಳ ಮೇಲೆ ಪ್ರಿಂಟ್ ಮಾಡಲಾಗಿರುತ್ತದೆ. ಉತ್ಪಾದಕರ ವಿವರಗಳನ್ನೂ ನಮೂದು ಮಾಡಲಾಗಿರುತ್ತದೆ ಎಂದು ಡಿಸಿ ವಿವರಿಸಿದರು.
ಪ್ರತ್ಯೇಕ ಬಣ್ಣದ ಚೀಲಗಳು
ವಿವಿಧ ಗ್ರೇಡ್ ಸಬ್ಸಿಡಿ ರಸಗೊಬ್ಬರಗಳಿಗೆ ಪ್ರತ್ಯೇಕ ಬಣ್ಣದ ಚೀಲಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಯೂರಿಯಾ ರಸಗೊಬ್ಬರಗಳಿಗೆ ಹಳದಿ ಬಣ್ಣದ ಚೀಲ, ಡಿಎಪಿ ರಸಗೊಬ್ಬರಗಳಿಗೆ ಹಸಿರು ಬಣ್ಣದ ಚೀಲ, ಪೊಟ್ಯಾಷ್ ರಸಗೊಬ್ಬರಗಳಿಗೆ ಕೆಂಪು ಬಣ್ಣದ ಚೀಲ ಹಾಗೂ ಕಾಂಪ್ಲೇಕ್ಷ್ ರಸಗೊಬ್ಬರಗಳನ್ನು ನೀಲಿ ಬಣ್ಣದ ಚೀಲಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಯಾವುದೇ ಕಂಪನಿಯ ರಸಗೊಬ್ಬರಗಳು ಈಗ ನಿರ್ದಿಷ್ಟ ಬಣ್ಣದ ಚೀಲಗಳಲ್ಲಿ ಭಾರತ್ ಬ್ರಾಂಡ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಡಿಸಿ ವಿವರಿಸಿದರು.
ರಸಗೊಬ್ಬರಗಳ ದಾಸ್ತಾನು ವಿವರ
ಜಿಲ್ಲೆಯಲ್ಲಿ ಯೂರಿಯಾ- 22,039 ಮೆಟ್ರಿಕ್ ಟನ್, ಡಿಎಪಿ- 3,168 ಮೆಟ್ರಿಕ್ ಟನ್, ಪೊಟ್ಯಾಷ್-2,020 ಮೆಟ್ರಿಕ್ ಟನ್ ಹಾಗೂ ಕಾಂಪ್ಲೆಕ್ಸ್- 45,553 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.