ಹಾವೇರಿ ತಹಸೀಲ್ದಾರ್ ಕಚೇರಿ ಸ್ಥಳಾಂತರಕ್ಕೆ ಚಿಂತನೆ; ತಾತ್ಕಾಲಿಕವಾಗಿ ತಗಡಿನ ಶೀಟ್ ಅಳವಡಿಕೆಗೆ ಡಿಸಿ ಸೂಚನೆ

25 HVR 7 C
Published on

ಹಾವೇರಿ: ಇಲ್ಲಿನ ತಹಸೀಲ್ದಾರ್ ಕಚೇರಿ ಸೋರಿಕೆಯಿಂದ ಅವಾಂತರ ಸೃಷ್ಟಿಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಗುರುವಾರ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ತಾತ್ಕಾಲಿಕವಾಗಿ ತಗಡಿನ ಶೀಟ್ ಅಳವಡಿಸಲು ಸೂಚಿಸಿರುವ ಅವರು ಕಚೇರಿಯನ್ನು ಬೇರೆಡೆ ಸ್ಥಳಾಂತರಿಸಲು ಚಿಂತನೆ ನಡೆಸಿದ್ದಾಗಿ ತಿಳಿಸಿದ್ದಾರೆ.
ನಗರದ ತಹಸೀಲ್ದಾರ್ ಕಚೇರಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಕಟ್ಟಡದ ಮೇಲ್ಛಾವಣಿ, ಭೂದಾಖಲೆ ವಿಭಾಗ, ತಹಸೀಲ್ದಾರ್ ಕಚೇರಿ, ಪರಿಶೀಲನೆ ನಡೆಸಿದರು. ಸೋರಿಕೆ ತಡೆಗಾಗಿ ಸದ್ಯ ತಾತ್ಕಾಲಿಕವಾಗಿ ಶೀಟ್ ಅಳವಡಿಸುವಂತೆ ಸೂಚಿಸಿದ್ದೇನೆ. ಈ ಕಚೇರಿ ಚಿಕ್ಕದಾಗದ್ದು, ಬೇರೆಡೆ ಸ್ಥಳಾಂತರಿಸಲು ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಹಳೇ ತಹಸೀಲ್ದಾರ್ ಕಚೇರಿ, ಹಳೆಯ ಎಸ್‌ಪಿ ಕಚೇರಿ, ಮತ್ತಿತರ ಸ್ಥಳಗಳನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಈ ಕುರಿತು ನಿರ್ಧರಿಸಲಾಗುವುದು ಎಂದು ಅವರು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು.
‘ತಹಸೀಲ್ದಾರ್ ಕಚೇರಿ ಮೇಲ್ಛಾವಣಿ ಸೋರಿಕೆ’ ಶೀರ್ಷಿಕೆಯಡಿ ‘ವಿಜಯವಾಣಿ’ ಜು.23ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಡಿಸಿ ಭೇಟಿ ನೀಡಿ ಪರಿಹಾರಕ್ಕೆ ಸೂಚಿಸಿದ್ದು, ಕಚೇರಿ ಸ್ಥಳಾಂತರಕ್ಕೂ ಮುಂದಾಗಿದ್ದಾರೆ.
ಡಿಸಿ ಜತೆಗೆ ತಹಸೀಲ್ದಾರ ಜಿ.ಶಂಕರ, ಅಪರ ತಹಸೀಲ್ದಾರ ಅಮೃತಗೌಡ ಪಾಟೀಲ, ನಾಗರಾಜ ಚಕ್ರಸಾಲಿ, ಇತರರು ಇದ್ದರು.
ಇಂದಿನಿಂದ ಕೆಲಸ ಆರಂಭ
ಸೋರಿಕೆ ತಡೆಗಾಗಿ ತಗಡಿನ ಶೀಟ್ ಅಳವಡಿಸಲು ಡಿಸಿ ಸಾಹೇಬರು ಸೂಚಿಸಿದ್ದಾರೆ. ಮಳೆ ಇರುವ ಕಾರಣ ವೆಲ್ಡಿಂಗ್‌ಗೆ ಅಡ್ಡಿಯಾಗಲಿದ್ದು, ಆದರೂ ಪಕ್ಕದ ಶೆಡ್ ಮೂಲಕ ನಾಳೆಯಿಂದಲೇ ಕೆಲಸ ಆರಂಭಿಸಲಾಗುವುದು ಎಂದು ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ತಿಮ್ಮೇಶಕುಮಾರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net