ಉಪ ಲೋಕಾಯುಕ್ತರ ಜಿಲ್ಲಾ ಪ್ರವಾಸ 12ರಿಂದ; ಮೂರು ದಿನ ವಿವಿಧ ಕಾರ್ಯಕ್ರಮ ಆಯೋಜನೆ; ಸಾರ್ವಜನಿಕರಿಂದ ಅಹವಾಲು ಸ್ವೀಕಾರ 13ರಂದು

31 HVR 2
Published on

ಹಾವೇರಿ: ಉಪ ಲೋಕಾಯುಕ್ತ, ನ್ಯಾಯಮೂರ್ತಿ ಬಿ.ವೀರಪ್ಪ ಅವರು ಫೆ.12ರಿಂದ 14ರವರೆಗೆ ಮೂರು ದಿನ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಫೆ.13ರಂದು ಸಾರ್ವಜನಿಕರಿಂದ ದೂರು ಹಾಗೂ ಅಹವಾಲು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಲೋಕಾಯುಕ್ತರೊಂದಿಗೆ ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ವಿಚಾರಣಾ ನಿಬಂಧಕರಾದ ಕೆ.ಎಂ.ರಾಜಶೇಖರ, ಪಿ.ಶ್ರೀನಿವಾಸ ಹಾಗೂ ವಿಚಾರಣಾ ಉಪ ನಿಬಂಧಕರಾದ ಅರವಿಂದ ಎನ್.ವಿ. ಜಿಲ್ಲೆಗೆ ಆಗಮಿಸಲಿದ್ದಾರೆ ಎಂದರು.

ಗುರುಭವನದಲ್ಲಿ ನಾಲ್ಕು ಕೌಂಟರ್ :

ಫೆ.13ರಂದು ನಗರದ ಜಿಲ್ಲಾ ಗುರುಭವನದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆವರೆಗೆ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸಲಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದು, ಸ್ಥಳದಲ್ಲೇ ಪರಿಹಾರ ಒದಗಿಸಲಿದ್ದಾರೆ. ಸಾರ್ವಜನಿಕರ ಅಹವಾಲು ಸ್ವೀಕರಿಸಲು ಪ್ರತ್ಯೇಕ ನಾಲ್ಕು ಕೌಂಟರ್ ಸ್ಥಾಪಿಸಲಾಗುವುದು. ಅಲ್ಲಿ ಸಲ್ಲಿಸಲಾಗುವ ದೂರುಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗುವುದು. ಸಾರ್ವಜನಿಕರು ಅಹವಾಲು ಹಾಗೂ ದೂರು ಸಲ್ಲಿಸಲು ನಮೂನೆ 1 ಮತ್ತು 2 ಭರ್ತಿ ಮಾಡುವ ಕುರಿತು ಲೋಕಾಯುಕ್ತ ಸಿಬ್ಬಂದಿ ಸಹಾಯ ಮಾಡಲಿದ್ದಾರೆ ಎಂದರು.

ವಿವಿಧ ಸ್ಥಳಗಳಿಗೆ ಭೇಟಿ:

ಉಪ ಲೋಕಾಯುಕ್ತರು ಫೆ.12ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ರವರೆಗೆ ವಿವಿಧ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1.45ರಿಂದ 2.45ರವರೆಗೆ ಹಾವೇರಿ ನಗರದ ನ್ಯಾಯಾಲಯದ ಆವರಣದಲ್ಲಿರುವ ಹಾವೇರಿ ಬಾರ್ ಅಸೋಸಿಯೇಷನ್‌ನಲ್ಲಿ ವಕೀಲರೊಂದಿಗೆ ಸಂವಹನ ನಡೆಸಲಿದ್ದಾರೆ. ಮಧ್ಯಾಹ್ನ 2.45ರಿಂದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ಡಿಸಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಕರ್ನಾಟಕ ಲೋಕಾಯುಕ್ತ ಎಸ್‌ಪಿ ಎಂ.ಎಸ್.ಕೌಲಾಪುರೆ, ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಉಪಸ್ಥಿತರಿದ್ದರು.

ಬಾಕಿ 124 ಪ್ರಕರಣಗಳ ವಿಚಾರಣೆ

ಜಿಲ್ಲೆಗೆ ಸಂಬಂಧಿಸಿದ 124 ಲೋಕಾಯುಕ್ತ ಪ್ರಕರಣಗಳಿದ್ದು, ಫೆ.14ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆವರೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಗೆ ಸಂಬಂಧಪಟ್ಟ ಲೋಕಾಯುಕ್ತ ಸಂಸ್ಥೆಗಳಲ್ಲಿ ದಾಖಲಾಗಿರುವ ತನಿಖೆ ಮತ್ತು ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಲ್ಲಿ ದೂರುದಾರರು ಹಾಗೂ ಎದುರುಗಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಲಿದ್ದಾರೆ. ಇದರಿಂದ ದೂರುದಾರರು ಹಾಗೂ ಎದುರುದಾರರು ವಿಚಾರಣೆಗೆ ಬೆಂಗಳೂರು ತೆರಳುವುದು ತಪ್ಪುತ್ತದೆ ಹಾಗೂ ಸಮಯದ ಉಳಿತಾಯವಾಗಲಿದೆ ಎಂದು ಡಿಸಿ ವಿವರಿಸಿದರು.

ಭ್ರಷ್ಟಾಚಾರ, ದುರಾಡಳಿತ ತಿಳಿಸಿ

ಜಿಲ್ಲೆಯಲ್ಲಿ ಯಾರಿಗಾದರೂ ಸರ್ಕಾರಿ ಅಧಿಕಾರಿ ಹಾಗೂ ನೌಕರರಿಂದ ಕಿರುಕುಳ ಆಗಿದ್ದರೆ, ಕೆಲಸ ಮಾಡಿಕೊಡಲು ಹಣ ಕೇಳಿದ್ದರೆ, ಕೆಲಸದಲ್ಲಿ ವಿಳಂಭ ಮಾಡಿದ್ದರೆ, ದುರಾಡಳಿತದಲ್ಲಿ ತೊಡಗಿಕೊಂಡಿದ್ದರೆ, ಅರ್ಹರಿದ್ದರೂ ಸೌಲಭ್ಯ ಕಲ್ಪಿಸದಿದ್ದರೆ ಸಾರ್ವಜನಿಕರು ಉಪ ಲೋಕಾಯುಕ್ತರ ಮುಂದೆ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಡಿಸಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net