

ಹಾವೇರಿ: ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಎಲ್ಲ ಶಿಕ್ಷಕರಿಗೂ ಮಾದರಿಯಾಗಿದ್ದಾರೆ. ಗುರು-ಶಿಷ್ಯರ ಸಂಬಂಧ ಎಂದೆಂದಿಗೂ ಅನ್ಯೋನ್ಯವಾಗಿರಬೇಕು. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸಲಹೆ ನೀಡಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 136ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸಬೇಕು, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಉನ್ನತ ಹುದ್ದೆಗಳಿಗೆ ತಯಾರು ಮಾಡುವಲ್ಲಿ ಗುರುಶಕ್ತಿ ದೊಡ್ಡದು ಎಂದರು.
ಶಿಕ್ಷಕರು ಕೆಲವು ಬೇಡಿಕೆಗಳನ್ನು ಸಲ್ಲಿಸಿದ್ದು, ಎಲ್ಲ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು. ಶಾಲೆಗಳ ಆಸ್ತಿ ಸಂರಕ್ಷಣೆಗೆ ಇ-ಆಸ್ತಿ, ಶುದ್ಧ ಕುಡಿಯುವ ನೀರಿನ ಘಟಕ, ಕಾಂರ್ಪಂಡ್, ಭೋಜನಾಲಯ, ಶೌಚಗೃಹ, ತ್ಯಾಜ್ಯ ವಿಲೇವಾರಿ ಸೇರಿ ಮೂಲ ಸೌಕರ್ಯ ಒದಗಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ ಮಾತನಾಡಿ, ಸಾರ್ವಜನಿಕರು ಶಿಕ್ಷಕರ ದಿನಾಚರಣೆ ಆಚರಿಸುವಂತಾಗಬೇಕು ಎಂದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ವೃತ್ತಿ ಬಹಳ ಒಳ್ಳೆಯ ಕೆಲಸವಾಗಿದೆ. ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ, ಧೈರ್ಯ, ಸಂಯಮ, ರಾಷ್ಟ್ರಾಭಿಮಾನ ತುಂಬುವ ಕೆಲಸವಾಗಬೇಕು. ಪಾಶ್ಚಿಮಾತ್ಯ ಅನುಕರಣೆಯಿಂದ ಇಂದು ಯುವಜನತೆ ದಾರಿ ತಪ್ಪುತ್ತಿರುವುದು ವಿಷಾಧದ ಸಂಗತಿಯಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳಿಸಿದರೆ ಸಾಲದು, ಜೀವನ ಕೌಶಲ ಕಲಿಸುವುದು ಮುಖ್ಯವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ನೈತಿಕ, ಮೌಲ್ಯಯುತ ಶಿಕ್ಷಣ, ಸಾಮಾಜಿಕ ನ್ಯಾಯ, ಭ್ರಾತೃತ್ವದ ಶಿಕ್ಷಣ ನೀಡಬೇಕು. ಅಂದಾಗ ಮಾತ್ರ ಪ್ರಬಲ ರಾಷ್ಟ್ರಕಟ್ಟಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ಸ್ಮಾರ್ಟ್ ಕ್ಲಾಸ್‌ಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಬಹುದು. ಆದರೆ, ನಡತೆ ಹಾಗೂ ಮೌಲ್ಯಯುತ ಶಿಕ್ಷಣ ತಂತ್ರಜ್ಞಾನದಿಂದ ಆಗಲ್ಲ. ಇದು ಶಿಕ್ಷಕರಿಂದ ಮಾತ್ರ ಸಾಧ್ಯ. ಮಕ್ಕಳು ಮಣ್ಣು ಇದ್ದಹಾಗೆ ಶಿಕ್ಷಕರು ಅವರಿಗೆ ಆಕಾರ ನೀಡುವ ಕೆಲಸಮಾಡಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ಎನ್ನುವ ಹಾಗೆ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಮೌಲ್ಯಯುತ ನೀಡಬೇಕು ಎಂದರು.
ಸಾನಿಧ್ಯ ವಹಿಸಿದ್ದ ಉಪ್ಪಿನಬೆಟಗೇರಿ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಂ.ಎ.ಎಣ್ಣಿ, ಡಯಟ್ ಉಪನಿರ್ದೇಶಕ ಗಿರೀಶ ಪದಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ನಿಜಲಿಂಗಪ್ಪ ಬಸೇಗಣ್ಣಿ, ಎಂ.ಎಂ.ಮೈದೂರ, ಇತರರು ಉಪಸ್ಥಿತರಿದ್ದರು.
ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು.
ಪೋಸ್ಟರ್ ಬಿಡುಗಡೆ
ಸಾಕ್ಷರತಾ ದಿನಾಚರಣೆ ಅಂಗವಾಗಿ ಎಲ್ಲರಿಗೂ ಶಿಕ್ಷಣ ಎಂಬ ಪೋಸ್ಟರ್‌ಅನ್ನು ಬಿಡುಗಡೆ ಮಾಡಲಾಯಿತು.
21 ಗುರುಗಳಿಗೆ ಪ್ರಶಸ್ತಿ
ಜಿಲ್ಲೆಯ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ತಲಾ ಏಳು ಶಿಕ್ಷಕರು ಸೇರಿ ಒಟ್ಟು 21 ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು.