

ಹಾವೇರಿ: ಚುನಾವಣಾ ಕಾರ್ಯಗಳನ್ನು ಗಂಭೀರವಾಗಿ ಪರಿಗಣಿಸಿ, ಹಗುರವಾಗಿ ತೆಗೆದುಕೊಳ್ಳಬೇಡಿ. ಪ್ರತಿ ಚುನಾವಣೆಯೂ ವಿಭಿನ್ನವಾಗಿರುತ್ತದೆ. ಆಯೋಗದ ನಿಯಮಾವಳಿಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ, ಮತದಾನದ ಗೌಪ್ಯತೆಯನ್ನು ಕಾಪಾಡಿಕೊಳ್ಳಿ. ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ಪಾರದರ್ಶಕ ಹಾಗೂ ಶಾಂತಿಯುತ ಮತದಾನ ಪ್ರಕ್ರಿಯೆ ನಡೆಸುವುದು ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ಸೂಚಿಸಿದರು.
ನಗರದ ಹುಕ್ಕೇರಿಮಠ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಹಾವೇರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ ಮೊದಲ ಹಂತದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮತದಾನ ಪ್ರಕ್ರಿಯೆ ಜವಾಬ್ದಾರಿ ಜತೆಗೆ ಬೇಸಿಗೆ ಬಿಸಿಲಿನ ಅತ್ಯಂತ ಹೆಚ್ಚು ತಾಪ ಇರುವುದರಿಂದ ವೈಯಕ್ತಿವಾಗಿ ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಚುನಾವಣಾ ಕಾರ್ಯವನ್ನು ಒತ್ತಡರಹಿತವಾಗಿ ಸಂತೋಷದಿಂದ ಕೆಲಸ ಮಾಡುವಂತೆ ಸಲಹೆ ನೀಡಿದರು.
ವ್ಯವಸ್ಥಿತ ಮತದಾನ ಪ್ರಕ್ರಿಯೆ ನಡೆಸಲು ಭಾರತ ಚುನಾವಣಾ ಆಯೋಗ ನೀಡಿರುವ ಮತಗಟ್ಟೆ ಅಧಿಕಾರಿಗಳ ಕೈಪಿಡಿಯ ನಿಯಮಾವಳಿಗಳನ್ನು ನಿಖರವಾಗಿ ಹಾಗೂ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಯಾವುದೇ ಗೊಂದಲಗಳಿದ್ದರೆ ತರಬೇತಿ ಅವಧಿಯಲ್ಲಿ ಚರ್ಚಿಸಿ ಪರಿಹಾರ ಕಂಡು ಕೊಳ್ಳಬೇಕು. ಮತಗಟ್ಟೆವರೆಗೆ ನಿಮ್ಮ ಡೌಟ್‌ಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಸೂಚಿಸಿದರು.
ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆಯಾದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರಕಂಡುಕೊಳ್ಳಿ. ವಿವಿ ಪ್ಯಾಟ್‌ಗಳ ನಿರ್ವಹಣೆ ಸಹ ಅಚ್ಚುಕಟ್ಟಾಗಿರಬೇಕು. ವಿವಿಪ್ಯಾಟ್‌ಗಳನ್ನು ಕಿಟಕಿಯ ಪಕ್ಕ ಹಾಗೂ ರೂಮಿನ ಲೈಟ್ ಕೆಳಗೆ ಇಡದೇ ಸುರಕ್ಷಿತ ಸ್ಥಳದಲ್ಲಿ ಇಟ್ಟು ಗೊಂದಲವಾಗದಂತೆ ಕ್ರಮ ವಹಿಸಬೇಕು. ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಎಂದು ತಿಳಿಸಿದರು.
ಮತದಾರರಿಗೆ ಎಡಗೈ ತೋರುಬೆರಳಿಗೆ ಶಾಹಿ ಹಾಕಬೇಕು. ಅಂಧ ಹಾಗೂ ದುರ್ಬಲ ಮತದಾರರ ಸಹಾಯಕರಾಗಿ ಬಂದವರಿಗೆ(18 ವರ್ಷ ಮೇಲ್ಪಟ್ಟವರಿಗೆ) ಬಲ ತೋರುಬೆರಳಿಗೆ ಅಳಿಸಲಾಗದ ಶಾಹಿ ಹಚ್ಚಬೇಕು. ಒಬ್ಬನೇ ವ್ಯಕ್ತಿ ಪದೇಪದೆ ಅಂಗವಿಕಲ ಮತದಾರರನ್ನು ಕರೆತರದಂತೆ ಎಚ್ಚರಿಕೆ ವಹಿಸಬೇಕು. ಮತದಾನ ಆರಂಭವಾದ ಎರಡು ಗಂಟೆಗೊಮ್ಮೆ ಅಂಕಿಅಂಶ ವರದಿ ಮಾಡಬೇಕು. ಮೂರು ಗಂಟೆಗೊಮ್ಮೆ ವಿಶೇಷಚೇತನ ಮತದಾರ ಅಂಕಿಅಂಶ ನೀಡಬೇಕು. ಮಹಿಳಾ, ಪುರುಷ, ವಿಶೇಷಚೇತನ ಹಾಗೂ ದುರ್ಬಲ ಮತದಾರರಿಗೆ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಮತದಾನ ಮಾಡಲು ವೋಟರ್ ಸ್ಲೀಪ್ ಜತೆಗೆ ಭಾರತ ಚುನಾವಣಾ ಆಯೋಗ ನೀಡಿದ ಎಪಿಕ್ ಕಾರ್ಡ್ ಅಥವಾ ಚುನವಣಾ ಆಯೋಗ ಮಾನ್ಯ ಮಾಡಿದ ಭಾವಚಿತ್ರವಿರುವ ಇತರ ಯಾವುದಾದರೊಂದು ಗುರುತು ಪತ್ರಗಳನ್ನು ಖಚಿತಪಡಿಸಿಕೊಂಡು ಮತದಾನಕ್ಕೆ ಅವಕಾಶ ಕಲ್ಪಿಸಬೇಕು. ಮತದಾನಕ್ಕೆ ಮಾತ್ರ ಸರತಿಯಂತೆ ನಿಯಮಬದ್ಧವಾಗಿ ಮತದಾರರಿಗೆ ಪ್ರವೇಶಾವಕಾಶವಿರುತ್ತದೆ ಎಂದರು.
ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ಹಾವೇರಿ ತಹಶೀಲ್ದಾರ್ ಎನ್.ಜೆ.ನಾಗರಾಜ, ತರಬೇತಿ ಅಧಿಕಾರಿಗಳು ಉಪಸ್ಥಿತರಿದ್ದರು.
ಅಣುಕು ಮತದಾನ ಕಡ್ಡಾಯ
ಮತದಾನ ಆರಂಭವಾಗುವ ಒಂದು ಗಂಟೆ ಮುಂಚಿತವಾಗಿ ಬೆಳಗ್ಗೆ 6 ಗಂಟೆಗೆ ಮೈಕ್ರೋ ಆಬ್ಜರ್ವರ್ ಹಾಗೂ ವಿವಿಧ ಪಕ್ಷಗಳ ಮತಗಟ್ಟೆ ಏಜೆಂಟರ ಸಮ್ಮುಖದಲ್ಲಿ ಅಣುಕು ಮತದಾನ ನಡೆಸಿ ಅಭ್ಯರ್ಥಿವಾರು ಮತದಾನವಾಗಿರುವ ಕುರಿತಂತೆ ಎಣಿಕೆ ಮಾಡಿ ಸಹಿ ಪಡೆಯಬೇಕು. ನಂತರ ಮತಯಂತ್ರದಲ್ಲಿ ಅಣುಕು ಮತದಾನದ ಸಂಖ್ಯೆಗಳನ್ನು ತೆಗೆದುಹಾಕಿ ಹೊಸದಾಗಿ ಶೂನ್ಯದಿಂದ ವಾಸ್ತವ ಮತದಾನ ಪ್ರಕ್ರಿಯೆಯನ್ನು ಬೆಳಗ್ಗೆ 7 ಗಂಟೆಯಿಂದ ಆರಂಭಿಸಬೇಕು. ಈ ಎಲ್ಲ ಪ್ರಕ್ರಿಯೆಗಳನ್ನು ಏಜೆಂಟರ ಸಮ್ಮುಖದಲ್ಲಿ ಪಾರದರ್ಶಕವಾಗಿ ನಡೆಸಿ, ಸಹಿ ಪಡೆಯಿರಿ ಎಂದು ಡಿಸಿ ಸಲಹೆ ನೀಡಿದರು.
ಪ್ರಾಯೋಗಿಕ ತರಬೇತಿ:
ಭಾರತ ಚುನಾವಣಾ ಆಯೋಗದ ನಿಯಮಾವಳಿಯಂತೆ ಮತದಾನ ಪ್ರಕ್ರಿಯೆ, ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಪ್ರಕ್ರಿಯೆ, ವಿದ್ಯುನ್ಮಾನ ಮತಯಂತ್ರಗಳ ಬಳಕೆ, ಮತದಾನ ಪ್ರಕ್ರಿಯೆಗೆ ವಿದ್ಯುನ್ಮಾನ ಮತಯಂತ್ರಗಳ ಸಿದ್ಧತೆ, ಮತಗಟ್ಟೆ ಅಧಿಕಾರಿಗಳ ಆಸನ ವ್ಯವಸ್ಥೆ, ಹಾಗೂ ಏಜೆಂಟರ ಆಸನ ವ್ಯವಸ್ಥೆ, ವಿವಿಧ ಲಕೋಟೆ ಹಾಗೂ ನಮೂನೆಗಳ ಭರ್ತಿ ಮಾಡುವುದು ಹಾಗೂ ಮತದಾನದ ಸಂದರ್ಭದಲ್ಲಿ ಉಂಟಾಗುವ ವಿಶೇಷ ಸನ್ನಿವೇಶಗಳ ನಿರ್ವಹಣೆ ಕುರಿತಂತೆ ಡಿಸಿ ವಿವರವಾಗಿ ಮಾಹಿತಿ ನೀಡಿದರು. ವಿದ್ಯುನ್ಮಾನ ಮತಯಂತ್ರಗಳ ಬಳಕೆ ಕುರಿತು ಪ್ರಾತ್ಯಕ್ಷಿತೆ ಮೂಲಕ ತರಬೇತಿ ನೀಡಿದರು.