

ಹಾವೇರಿ: ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಎನಿವೇರ್ ರಿಜಿಸ್ಟ್ರೇಷನ್ ಯೋಜನೆ ಜಾರಿಗೊಳಲಾಗುತ್ತಿದೆ. ಎನಿವೇರ್ ರಿಜಿಸ್ಟ್ರೇಷನ್ ಮೂಲಕ ಸಾರ್ವಜನಿಕರು ದಸ್ತಾವೇಜನ್ನು ಸ್ಥಿರಾಸ್ತಿ ಇರುವ ಜಿಲ್ಲೆಯ ಯಾವುದಾದರೂ ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
2024-25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಸರ್ಕಾರದಿಂದ ಘೋಷಿಸಲಾಗಿತ್ತು. ಈ ವ್ಯವಸ್ಥೆಯನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ 2011ರಲ್ಲಿ, ತುಮಕೂರು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಾರ್ಚ್ 2024ರಲ್ಲಿ ನೋಂದಣಿ ಕಾಯ್ದೆ 1908ರ ಕಲಂ(5) ಹಾಗೂ ಕಲಂ(6) ಅಡಿಯಲ್ಲಿ ಜಾರಿಗೊಳಿಸಲಾಗಿದೆ. ಎನಿವೇರ್ ನೋಂದಣಿ ವ್ಯವಸ್ಥೆ ಈ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರಣದಿಂದಾಗಿ ಎನಿವೇರ್ ನೋಂದಣಿಯನ್ನು ಹಾವೇರಿ ಜಿಲ್ಲೆಯ ಉಪ ನೋಂದಣಿ ಕಚೇರಿಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ.
ಎನಿವೇರ್ ನೋಂದಣಿ ವ್ಯವಸ್ಥೆ ಸಾರ್ವಜನಿಕರಿಗೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಿದ್ದು, ದಸ್ತಾವೇಜಿನ ನೋಂದಣಿಯಲ್ಲಿ ಪಾರದರ್ಶಕತೆ ಹೆಚ್ಚಿಸುತ್ತದೆ. ನೋಂದಣಿಯಲ್ಲಿ ವಿಳಂಬ ತಡೆಗಟ್ಟುತ್ತದೆ. ಸಾರ್ವಜನಿಕರು ಸಮೀಪದಲ್ಲಿರುವ ಉಪ ನೋಂದಣಿ ಕಚೇರಿಯಲ್ಲಿ ದಸ್ತಾವೇಜನ್ನು ನೋಂದಾಯಿಸಬಹುದು. ಸ್ಲಾಟ್ ಲಭ್ಯವಿರುವಂತಹ ಕಚೇರಿಯನ್ನು ನೋಂದಣಿಗೆ ಆಯ್ಕೆ ಮಾಡಿಕೊಳ್ಳಬಹುದು. ನೋಂದಣಿ ಪ್ರಕ್ರಿಯೆ ಸುಲಭವಾಗುವುದಲ್ಲದೆ ಸಮಯವೂ ಉಳಿಯುತ್ತದೆ. ಕಚೇರಿ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ ಹಾಗೂ ಕಚೇರಿಗಳಲ್ಲಿ ನೋಂದಣಿ ಕೆಲಸ ಸಮಾನವಾಗಿ ಹಂಚಿಕೆಯಾಗುತ್ತದೆ.
ಹಾಗಾಗಿ, ಸಾರ್ವಜನಿಕರು ಎನಿವೇರ್ ನೋಂದಣಿಯ ಸದುಪಯೋಗಪಡೆದುಕೊಂಡು ತಮಗೆ ಹತ್ತಿರದ ಅಥವಾ ನೋಂದಣಿಗೆ ಸ್ಲಾಟ್ ಲಭ್ಯವಿರುವಂತಹ ಕಚೇರಿಗೆ ಆಯ್ಕೆ ಮಾಡಿಕೊಂಡು ದಸ್ತಾವೇಜನ್ನು ನೋಂದಾಯಿಸಿಕೊಳ್ಳಬಹುದು. ಉದಾಹರಣೆಗೆ ಹಾವೇರಿ ನಗರದ ಆಸ್ತಿಯನ್ನು ಮಾರಾಟ ಅಥವಾ ಖರೀದಿ ಮಾಡಲು ಜಿಲ್ಲೆಯ ಎಲ್ಲ ತಾಲೂಕುಗಳ ಉಪ ನೋಂದಣಿ ಕಚೇರಿಗಳ ಪೈಕಿ ಯಾವುದೇ ಉಪ ನೋಂದಣಿ ಕಚೇರಿಯಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಮಾಡಿಕೊಳ್ಳಬಹುದಾಗಿದೆ ಎಂದು ಡಿಸಿ ತಿಳಿಸಿದ್ದಾರೆ.