ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಿ; ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸರಿಗೆ ನೊಂದ ರೈತರು, ಮಹಿಳೆಯರಿಂದ ಆಗ್ರಹ

15 HVR 10
Published on

ಹಾವೇರಿ: ಜಿಲ್ಲೆಯಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ಸಾಲ ಕೊಟ್ಟು ವಸೂಲಿಗಾಗಿ ಇನ್ನಿಲ್ಲದ ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿ ಜಿಲ್ಲೆಯ ನೊಂದ ಮಹಿಳೆಯರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ನಗರದ ಎಸ್‌ಪಿ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ರೈತ ಸಂಘದ ರಾಣೆಬೆನ್ನೂರ ತಾಲೂಕಾಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ ಸೇರಿದಂತೆ ಜಿಲ್ಲೆಯ ಎಲ್ಲೆಡೆ ನಾಯಿಕೊಡೆಗಳಂತೆ ಮೈಕ್ರೋ ಫೈನಾನ್ಸ್‌ಗಳು ಹುಟ್ಟಿಕೊಂಡಿವೆ. ಸಾಲ ಕೊಡುವಾಗ ಸಲೀಸಾಗಿ ಸಾಲ ಕೊಡುತ್ತಾರೆ. ನಂತರ ಬಡ್ಡಿ, ಮೀಟರ್ ಬಡ್ಡಿ ಎಂದು ದುಪ್ಪಟ್ಟು ವಸೂಲಿ ಮಾಡುವ ಮೂಲಕ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಅದರಲ್ಲೂ ರೈತರು, ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಜೆ ನಂತರ ಮನೆಯ ಮುಂದೆ ಬರುವ ವಸೂಲಿಕಾರರು ಸಾಲಗಾರರಿಗೆ ಅವಮಾನ ಮಾಡುತ್ತಿದ್ದಾರೆ. ಮನೆಗೆ ಬೀಗ ಹಾಕುತ್ತೇವೆ. ಹರಾಜು ಹಾಕುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಮೊದಲೇ ಬರಗಾಲದಿಂದ ತತ್ತರಿಸಿರುವ ರೈತರಿಗೆ ಇದರಿಂದ ಮತ್ತಷ್ಟು ಸಂಕಷ್ಟ ಎದುರಾಗಿದೆ. ಸ್ವಲ್ಪ ಸಮಯ ಕೊಡಿ ಎಂದರೂ ಕೇಳದೇ ತೊಂದರೆ ಕೊಡುತ್ತಿದ್ದಾರೆ. ಒಂದು ಫೈನಾನ್ಸ್‌ನಲ್ಲಿ ಕೇವಲ ಆಧಾರ್ ಕಾರ್ಡ್ ಪಡೆದು ಸಾಲ ಕೊಡುತ್ತಾರೆ. ಮತ್ತೆ ಅದೇ ಆಧಾರ್ ಕಾರ್ಡ್ ಪಡೆದು ಇನ್ನೊಂದು ಫೈನಾನ್ಸ್‌ನಲ್ಲಿ ಸಾಲ ಕೊಡುತ್ತಾರೆ. ಹಣ ಕಟ್ಟಲಾಗದವರ ಮೆನೆಗೆ ಹೋಗಿ ಬೆದರಿಕೆ ಹಾಕುತ್ತಾರೆ ಎಂದು ದೂರಿದರು.
ಈ ಕೂಡಲೇ ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ಬ್ರೇಕ್ ಹಾಕಬೇಕು. ಫೈನಾನ್ಸ್‌ಗಳ ಗೂಂಡಾಗಳು ಒತ್ತಡ ಹೇರಿ ವಸೂಲಿ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಹಾಗೂ ಎಎಸ್‌ಪಿ ಸಿ.ಗೋಪಾಲ ಅವರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನೂರ್‌ಅಹ್ಮದ್ ಬಡಿಗೇರ, ಚಂದ್ರಪ್ಪ ತಳವಾರ, ರಮೇಶ ಹೆಡಿಯಾಲ, ಜಗದೀಶ ತಳವಾರ, ದಾದಾಪೀರ್ ಎಲಿಗಾರ, ರತ್ನವ್ವ ಬಿ.ಬಿ., ಜುಬೇದಾ ಜುಬೇರ್, ಪೇರಿಜಾನ್ ಪಿ.ಎನ್., ಹನುಮಕ್ಕ ತಳವಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net