ಹಾವೇರಿ: ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸೆ.22ರಿಂದ ಅಕ್ಟೋಬರ್ 7ರವರೆಗೆ ರಾಜ್ಯದಲ್ಲಿ ಮನೆ ಮನೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಹಮ್ಮಿಕೊಳ್ಳಲಾಗಿದೆ.
ಸಮೀಕ್ಷೆಯಲ್ಲಿ ಸುಮಾರು 60 ಪ್ರಶ್ನೆಗಳಿದ್ದು, ಸಮೀಕ್ಷೆ ಕಾರ್ಯವನ್ನು ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಯ ಆಧಾರದ ಮೇಲೆ ಸಮೀಕ್ಷೆ ಮಾಡಲಾಗುವುದು. ಸಮೀಕ್ಷೆಗೆ ಅನುಕೂಲವಾಗುವಂತೆ ಹೆಸ್ಕಾಂ ವಿದ್ಯುತ್ ಮೀಟರ್ ರೀಡರ್‌ಗಳು ಈಗಾಗಲೇ ಪ್ರತಿ ಮನೆಗೆ ಭೇಟಿ ನೀಡಿ, ಯುಎಚ್‌ಐಡಿ ನಂಬರ್ ಹೊಂದಿರುವ ಸ್ಟಿಕರ್‌ಗಳನ್ನು ಅಂಟಿಸಿದ್ದಾರೆ. ಸಮೀಕ್ಷೆ ನಿಖರವಾಗಿ, ವೇಗವಾಗಿ ಮತ್ತು ಸುಲಭವಾಗಿ ನಡೆಯಲು ಎಲ್ಲ ನಾಗರಿಕರ ಸಹಕಾರ ಅತ್ಯಗತ್ಯವಾದ್ದರಿಂದ ಸಮೀಕ್ಷೆಯ ಸಂದರ್ಭದಲ್ಲಿ ಅನುಕೂಲವಾಗುವಂತೆ ಈ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಸಮೀಕ್ಷೆದಾರರಿಗೆ ಒದಗಿಸಿ, ಸಹಕಾರ ನೀಡಲು ಕೋರಲಾಗಿದೆ.
ಸಮೀಕ್ಷೆದಾರರು ಕೇಳುವ ಕುಟುಂಬದ ಪ್ರತಿ ಸದಸ್ಯರ ವಿದ್ಯಾರ್ಹತೆ, ಆದಾಯ, ಚಿರ-ಸ್ಥಿರ ಆಸ್ತಿಯ ವಿವರಗಳು, ಧರ್ಮ, ಜಾತಿ, ಉಪಜಾತಿ, ಕುಲ ಕಸುಬು ಮುಂತಾದ ವಿಷಯಗಳಿಗೆ ಕುಟುಂಬದ ಎಲ್ಲ ಸದಸ್ಯರ ನಿಖರವಾದ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಪ್ರಕಟಣೆ ತಿಳಿಸಿದೆ.
ಆಧಾರ್‌ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸಿ:
ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡಿದಾಗ, ಪಡಿತರ ಚೀಟಿ ಹಾಗೂ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್‌ಗಳು ಯಾವ ಮೊಬೈಲ್ ನಂಬರ್‌ಗೆ ಲಿಂಕ್ ಆಗಿದೆ ಎಂಬುದನ್ನು ಖಚಿತಪಡಿಸಿಟ್ಟುಕೊಳ್ಳುವುದು. ಒಂದು ವೇಳೆ ಆಧಾರ್‌ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇಲ್ಲದಿದ್ದಲ್ಲಿ ಈಗ ಬಳಸುತ್ತಿರುವ ಮೊಬೈಲ್ ಸಂಖ್ಯೆಯನ್ನು ಹತ್ತಿರದ ಆಧಾರ್ ನೋಂದಣಿ ಕೇಂದ್ರಗಳಿಗೆ ಹೋಗಿ ಲಿಂಕ್ ಮಾಡಿಸಬೇಕು. 6 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ. 6 ವರ್ಷದ ಮೇಲ್ಪಟ್ಟ ಎಲ್ಲರಿಗೂ ಆಧಾರ್ ಕಡ್ಡಾಯವಾಗಿರುತ್ತದೆ.
ಉಚಿತ ಸಹಾಯವಾಣಿ
ಹೆಚ್ಚಿನ ಮಾಹಿತಿಯ ಅಗತ್ಯವಿದ್ದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸಹಾಯವಾಣಿ 8050770004ಗೆ ಕರೆ ಮಾಡಿ ಅಥವಾ ವೆಬ್‌ಸೈಟ್ ವಿಳಾಸ https://kscbc.karnataka.gov.in ಸಂಪರ್ಕಿಸಬಹುದು.