ಸಮೀಕ್ಷೆದಾರರಿಗೆ 2ನೇ ಹಂತದ ತರಬೇತಿ

Published on

ಹಾವೇರಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶನದಂತೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)2025ರ ಕುರಿತು ಎರಡನೇ ತರಬೇತಿಯನ್ನು ನಗರದ ಹುಕ್ಕೇರಿ ಮಠ ಪ್ರೌಢಶಾಲೆ 471 ಗಣತಿದಾರರಿಗೆ ಹಾಗೂ ಗುತ್ತಲ ಆರ್.ಕೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ 271 ಗಣತಿದಾರರಿಗೆ ನೀಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಮಾತನಾಡಿ, ಈ ಸಮೀಕ್ಷೆಯ ಮುಖ್ಯ ಉದ್ದೇಶ ಹಿಂದುಳಿದ ವರ್ಗಗಳ ಬಡತನ, ನಿರುದ್ಯೋಗ, ಅನಕ್ಷರತೆಯಂತಹ ಸಮಸ್ಯೆಗಳನ್ನು ಗುರುತಿಸಿ, ವಿಶೇಷ ಯೋಜನೆಗಳನ್ನು ರೂಪಿಸುವುದಾಗಿದೆ. ಆದ್ದರಿಂದ ಎಲ್ಲ ಗಣತಿದಾರರು ಈ ದಿನದ ತರಬೇತಿಯಲ್ಲಿ ಸರಿಯಾದ ಮಾಹಿತಿ ಪಡೆದು ಯಾವುದೇ ಸಮಸ್ಯೆಗಳಿದ್ದರೆ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿದುಕೊಂಡು ಸೆ.22 ಅ.7ರವರೆಗೆ ನಡೆಯುವ ಸಮೀಕ್ಷೆಯಲ್ಲಿ ನಿಖರವಾದ ಅಂಕಿ ಅಂಶಗಳನ್ನು ದಾಖಲಿಸಬೇಕು ಎಂದು ಕರೆ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸುಬ್ರಾ ನಾಯ್ಕ ಮಾತನಾಡಿ, ರಾಜ್ಯದಲ್ಲಿಯೇ ನಿಖರವಾದ ಮಾಹಿತಿ ಸಲ್ಲಿಸಿದ ಕೀರ್ತಿ ನಮ್ಮದಾಗಿಸಿಕೊಳ್ಳೋಣ ಎಂದರು.

ತಹಸೀಲ್ದಾರ್ ಶರಣಮ್ಮ ಕಾರಿ ಮಾತನಾಡಿ, ಸಮೀಕ್ಷೆ ಯಾವುದೇ ಲೋಪ ದೋಷವಿಲ್ಲದೆ ನಡೆಯಲಿ ಎಂದು ಶುಭ ಹಾರೈಸಿದರು.

ಸಮೀಕ್ಷೆ ಸ್ಥಳಕ್ಕೆ ಡಿಸಿ ಭೇಟಿ

ಹಾವೇರಿ ನಗರದ ಮಂಜುನಾಥ ಕಾಲನಿ ಸಿ ಬ್ಲಾಕ್‌ನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಸಮೀಕ್ಷೆಗೆ ಚಾಲನೆ ನೀಡಿ, ಪರಿಶೀಲಿಸಿದರು. ಸಮೀಕ್ಷೆಯ ನೋಡಲ್ ಅಧಿಕಾರಿ ಸೈಯ್ಯದಾ ಆಫ್ರಿನ್‌ಬಾನು ಬಳ್ಳಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸುಬ್ರಾ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net