ನಕಲಿ ಜಾತಿ ಪ್ರಮಾಣಪತ್ರ ಪಡೆದರೆ ಕೇಸ್; ಎಸ್‌ಸಿ, ಎಸ್‌ಟಿ ಜಿಲ್ಲಾ ಜಾಗೃತಿ ಸಮಿತಿ ಸಭೆ; ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ

27 HVR 4
Published on

ಹಾವೇರಿ: ಇತರೆ ಸಮುದಾಯದವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ಪಡೆದ ಪ್ರಕರಣಗಳು ಕಂಡುಬಂದಲ್ಲಿ ಅಂತವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಕಲಿ ಜಾತಿ ಪ್ರಮಾಣಪತ್ರ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಿಗೆ ಸಲಹೆ ನೀಡಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಇರುವ ಸರ್ಕಾರದ ಸೌಲಭ್ಯಗಳ ಕುರಿತು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನಿನಡಿ ಇರುವ ಸೌಲಭ್ಯಗಳ ಕುರಿತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಲನಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ರಮೇಶ ಆನವಟ್ಟಿ, ಎನ್.ಎಂ ಗಾಳೆಮ್ಮನವರ, ಮುತ್ತುರಾಜ ಮಾದರ ಮಾತನಾಡಿ, ಕಳ್ಳಿಹಾಳ ಗ್ರಾಮದ ಪರಿಶಿಷ್ಟ ಜಾತಿಯವರ ಸ್ಮಶಾನಕ್ಕೆ ದಾರಿ ಸೌಲಭ್ಯ, ತುಂಗಾ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನ ಪಡೆದುಕೊಂಡ ಭೂಮಿ ಮರಳಿ ರೈತರಿಗೆ ನೀಡುವಂತೆ, ಸವಣೂರ ತಾಲೂಕು ಹಿರೇಮುಗದೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ನಿಯಮಾನುಸಾರ ಪರಿಶಿಷ್ಟ ಜಾತಿಯವರನ್ನು ಅಡುಗೆ ಸಹಾಯಕ ಹುದ್ದೆಗೆ ನೇಮಕಕ್ಕೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಸದಸ್ಯರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು, ಕಳ್ಳಿಹಾಳ ಗ್ರಾಮದ ಸ್ಮಶಾನ ಭೂಮಿಗೆ ಕೂಡಲೇ ಕ್ರಿಯಾಯೋಜನೆ ತಯಾರಿಸುವಂತೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ, ಹಿರೇಮುಗದೂರ ಅಡುಗೆ ಸಹಾಯಕರ ಹುದ್ದೆಗೆ ಈ ಮೊದಲು ನಿಯಮಾನುಸಾರ ಆಯ್ಕೆ ಅಭ್ಯರ್ಥಿ ಪಟ್ಟಿ ರದ್ದುಪಡಿಸಿ, ಪುನಃ ಮರು ಅರ್ಜಿ ಕರೆದಿದ್ದು ಸರಿಯಾದ ಕ್ರಮವಲ್ಲ. ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ, ಜನವರಿ-2025ರಿಂದ ಈವರೆಗೆ ವಿವಿಧ ನಾಲ್ಕು ದೌರ್ಜನ್ಯ ಪ್ರಕರಣಗಳಲ್ಲಿ 77,329 ರೂ. ಪರಿಹಾರ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಾಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ದರಾಮಯ್ಯ ಬರಗಿಮಠ, ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ಶ್ರೀಧರ ಆನವಟ್ಟಿ, ಕೃಷ್ಣಪ್ಪ ಚವ್ಹಾಣ ಹಾಗೂ ಇತರೆ ಸದಸ್ಯರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net