

ಹಾವೇರಿ: ಸವಣೂರು ತಾಲೂಕು ಚಿಕ್ಕಮುಗದೂರ ಸರ್ಕಾರಿ ಶಾಲೆಯಲ್ಲಿ ಖಾಲಿ ಇರುವ ಅಡುಗೆ ಸಿಬ್ಬಂದಿ ಸ್ಥಾನಕ್ಕೆ ಕೂಡಲೇ ಅರ್ಹರನ್ನು ನೇಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಅಭ್ಯರ್ಥಿ ನೇಮಕವಾಗಿದ್ದರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಎಸ್.ಡಿ.ಎಂ.ಸಿ.ಅಧ್ಯಕ್ಷರು ಸಹಿ ಮಾಡಿಲ್ಲ ಎಂದು ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರು ಸಭೆಯ ಗಮನಕ್ಕೆ ತಂದರು. ಕೂಡಲೇ ಅರ್ಹ ಅಭ್ಯರ್ಥಿಯ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೇಲೆ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂತ್ರಸ್ಥರಿಗೆ ಹಾಗೂ ಸಾಕ್ಷಿದಾರರಿಗೆ ಆತ್ಮಸ್ಥೈರ್ಯ ತುಂಬಬೇಕು, ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅವರಿಗಾಗಿ ಇರುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಿವೇಶನಕ್ಕೆ ಜಮೀನು ಗುರುತಿಸಿ:
ರಾಣೆಬೆನ್ನೂರ ತಾಲೂಕು ಬೇಲೂರ ಗ್ರಾಮದ ನಿವಾಸಿ ಭರಮವ್ವ ಮಾಗಳ ಜಾಗದ ಬಗ್ಗೆ ಬಹಳ ದಿನದಿಂದ ಸಮಸ್ಯೆ ಇದ್ದು, ಫಲಾನುಭವಿಗೆ ಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿಯಿಂದ ನಿವೇಶನ ಹಂಚಿಕೆ ಮಾಡುವಾಗ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡಬೇಕು. ಬೇಲೂರ ಗ್ರಾಮದಲ್ಲಿ ಬಡವರಿಗೆ, ನಿರ್ಗತಿಕರಿಗೆ ಹಾಗೂ ವಸಹಿ ರಹಿತರಿಗೆ ನಿವೇಶನ ನೀಡಲು ಕೂಡಲೇ ಜಮೀನು ಗುರುತಿಸಿ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಹಿತಿ ಫಲಕ ಅಳವಡಿಸಿ :
ಕಾಲಮಿತಿಯೊಳಗೆ ಯೋಜನೆಗಳ ಅನುಷ್ಠಾನಗೊಳಿಸಬೇಕು ಹಾಗೂ ಕೂಡಲೇ ಎಲ್ಲ ಇಲಾಖೆಗಳಲ್ಲಿ ಯೋಜನೆಗಳ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಜತೆಗೆ ಎಲ್ಲ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗದವರಿಗೆ ಇರುವ ಸೌಲಭ್ಯಗಳ ಮಾಹಿತಿ ಸಂಗ್ರಹಿಸಿ ಕಿರುಪುಸ್ತಕ ಮಾಡಿ ಜಿಲ್ಲಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ಡಿ.ವೈ.ಎಸ್.ಪಿ. ಎನ್.ಎಸ್.ಪಾಟೀಲ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬರಗಿಮಠ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ, ತಹಸೀಲ್ದಾರ್ ಶರಣಮ್ಮ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ರಮೇಶ ಆನವಟ್ಟಿ, ಎನ್.ಎಂ.ಗಾಳೆಮ್ಮನವರ, ಮುತ್ತುರಾಜ ಮಾದರ, ಕೃಷ್ಣಪ್ಪ ಚವ್ಹಾಣ, ಇತರರು ಉಪಸ್ಥಿತರಿದ್ದರು.
ಸ್ಮಶಾನಕ್ಕೆ ದಾರಿ ಪುಣ್ಯದ ಕಾರ್ಯ
ಕಳ್ಳಿಹಾಳ ಗ್ರಾಮದಲ್ಲಿ ಪರಿಶಿಷ್ಟ ಜನಾಂಗದವರ ಸ್ಮಶಾನಕ್ಕೆ ದಾರಿಗೆ ಜಮೀನು ನೀಡಬೇಕಾದರೆ ಸ್ಮಶಾನದ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಬೇಕು ಹಾಗೂ ಜಮೀನು ನೀಡುವ ಮಾಲೀಕನ ಜಮೀನಿನ ಸುತ್ತಲೂ ತಂತಿಬೇಲಿ ಹಾಕುವ ಕರಾರಿಗೆ ಒಪ್ಪಿದರೆ ಮಾತ್ರ ಸ್ಮಶಾಸನಕ್ಕೆ ದಾರಿ ನೀಡಲಾಗುವುದು ಎಂದು ಜಮೀನಿನ ಮಾಲೀಕರು ಸಭೆಗೆ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ತಮ್ಮ ಬೇಡಿಕೆ ಸಮಂಜಸವಾಗಿದ್ದು, ಕೂಡಲೇ ಸ್ಮಶಾನ ಜಾಗೆಗೆ ತಡೆಗೋಡೆ ನಿರ್ಮಾಣ ಸಾಧ್ಯವಾಗುವುದಿಲ್ಲ. ಹಂತ ಹಂತವಾಗಿ ಆದ್ಯತೆ ಮೇರೆಗೆ ಮಾಡಲಾಗುವುದು. ಇದು ಒಂದು ಪುಣ್ಯದ ಕೆಲಸವಾಗಿದ್ದು, ಸ್ಮಶಾನಕ್ಕೆ ಹೋಗಲು ದಾರಿಗೆ ಜಮೀನು ನೀಡಲು ಮನಸ್ಸು ಮಾಡಬೇಕು ಎಂದು ಜಮೀನನ ಮಾಲೀಕರನ್ನು ಡಿಸಿ ಕೋರಿದರು.
60 ಪ್ರಕರಣ, 74 ಲಕ್ಷ ಪರಿಹಾರ
ಜನವರಿ-2024ರಿಂದ ಈವರೆಗೆ ವಿವಿಧ 60 ದೌರ್ಜನ್ಯ ಪ್ರಕರಣಗಳಲ್ಲಿ 74 ಲಕ್ಷ ರೂ. ಪರಿಹಾರ ನೀಡಲಾಗಿದೆ. 71 ಪ್ರಕರಣಗಳು ನ್ಯಾಯಾಲದಲ್ಲಿ ವಿಚಾರಣೆ ನಡೆಯುತ್ತಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಸಭೆಗೆ ಮಾಹಿತಿ ನೀಡಿದರು.