ಸಹಬಾಳ್ವೆಯಿಂದ ವಿಶ್ವಶಾಂತಿ ಸಾಧ್ಯ; ರೆಡ್ ಕ್ರಾಸ್ ವಾಕಾಥಾನ್‌ಗೆ ಚಾಲನೆ ನೀಡಿದ ಡಿಸಿ ಅನಿಸಿಕೆ

21 HVR 4 B
Published on

ಹಾವೇರಿ: ಮನುಕುಲದ ಉಳಿವಿಗಾಗಿ ವಿಶ್ವ ಶಾಂತಿಗೆ ಹೆಚ್ಚು ಮಹತ್ವ ನೀಡಬೇಕಿದೆ. ಸಹಬಾಳ್ವೆಯ ಗುಣದಿಂದ ವಿಶ್ವಶಾಂತಿ ಮನೋಭಾವನೆ ಬೆಳೆಸಲು ಸಾಧ್ಯ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಶ್ರೀ ಹುಕ್ಕೇರಿ ಮಠದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಯೂತ್ ರೆಡ್ ಕ್ರಾಸ್, ಕೆಎಂಎಫ್, ಲಯನ್ಸ್ ಸಂಸ್ಥೆ, ರೋಟರಿ ಸಂಸ್ಥೆ, ಇನ್ನರ್ ವ್ಹೀಲ್ ಕ್ಲಬ್, ಜೆಸಿಐ, ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘದ ಸಹಯೋಗದಲ್ಲಿ ವಿಶ್ವಶಾಂತಿ ದಿನದ ಅಂಗವಾಗಿ ಆಯೋಜಿಸಿದ್ದ ವಾಕಾಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಧುನಿಕ ಕಾಲದಲ್ಲಿ ವಿಶ್ವದಲ್ಲಿ ಭಾತೃತ್ವ ಮನೋಭಾವನೆಯನ್ನು ವಿದ್ಯಾರ್ಥಿಗಳಿಗೆ ಮೂಡಿಸುವ ಕೆಲಸ ಮಾಡಬೇಕಿದೆ. ಯುದ್ಧದಿಂದ ವಿನಾಶವೇ ಹೊರತು ಲಾಭದಾಯಕವಲ್ಲ. ಆಯುಧಗಳ ಬಳಕೆಯಿಂದ ಶಾಂತಿ ಮೂಡಲು ಸಾಧ್ಯವಿಲ್ಲ. ರೆಡ್ ಕ್ರಾಸ್ ಸಂಸ್ಥೆ ವಿಶ್ವದಲ್ಲಿ ಭಾವೈಕ್ಯತೆಯ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಾಕಥಾನ್ ಜಾಗೃತಿ ಜಾಥಾ ಹಮ್ಮಿಕೊಂಡಿದೆ ಎಂದರು.
ಸಾನಿಧ್ಯ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ವಸುದೈವ ಕುಟುಂಬಕಂ ಎಂಬಂತೆ ವಿಶ್ವವೇ ಒಂದು ಕುಟುಂಬವಾಗಿದ್ದು, ವಿಶ್ವ ಶಾಂತಿಗಾಗಿ ಎಲ್ಲರೂ ಶಾಂತಿ ಗುಣ ಬೆಳಿಸಿಕೊಳ್ಳಬೇಕಿದೆ ಎಂದರು.
ಜಾಥಾದಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಶ್ವಶಾಂತಿ, ರಸ್ತೆ ಸಂರಕ್ಷಣೆ, ಪರಿಸರ ಸಂರಕ್ಷಣೆ, ಆರೋಗ್ಯಕರ ಘೋಷಣೆಗಳು ಮೊಳಗಿದವು. ಹುಕ್ಕೇರಿ ಮಠದಿಂದ ಪ್ರಾರಂಭವಾಗಿ ಎಂ.ಜಿ.ರೋಡ್ ಮೂಲಕ ಮೈಲಾರ ಮಹಾದೇವಪ್ಪ ಸರ್ಕಲ್, ಹೊಸಮನಿ ಸಿದ್ದಪ್ಪ ವೃತ್ತ, ಜೆಪಿ ಸರ್ಕಲ್, ಗುರುಭವನ, ಜೆಎಚ್ ಪಟೇಲ್ ವೃತ್ತದ ಮೂಲಕ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದವರೆಗೆ ಜರುಗಿತು.
ಜಾಥಾದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಗೌರವ ಉಪಾಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ, ಗೌರವ ಜಿಲ್ಲಾ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ, ರಾಜ್ಯ ಸಮಿತಿ ಸದಸ್ಯ ರವಿ ಮೆಣಸಿನಕಾಯಿ, ಗೌರವ ಕಾರ್ಯದರ್ಶಿ ಡಾ.ನೀಲೇಶ ಎಂ.ಎನ್, ಸಹಗೌರವ ಕಾರ್ಯದರ್ಶಿ ನಿಂಗಪ್ಪ ಆರೇರ, ಖಜಾಂಚಿ ಪ್ರಭು ಹಿಟ್ನಳ್ಳಿ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸದಸ್ಯರಾದ ಹನುಮಂತಗೌಡ ಗೊಲ್ಲರ, ರವಿ ಹಿಂಚಿಗೇರಿ, ಉಡಚಪ್ಪ ಮಾಳಗಿ, ಡಿ.ಎಚ್.ಒ ಡಾ.ರಾಜೇಶ ಸುರಗಿಹಳ್ಳಿ, ಡಾ.ಅಂಕಿತ ಆನಂದ, ಫಕ್ಕೀರೇಶ ಬಾರಕೇರ, ಜಗದೀಶ ಬೆಟಗೇರಿ, ಇರ್ಷಾದ್‌ಅಲಿ ಎಸ್.ಡಿ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net