ಹಾವೇರಿ: ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಹಿನ್ನೆಲೆ ರಾಣೆಬೆನ್ನೂರ ನಗರಸಭೆ ವಾರ್ಡ್ ಸಂಖ್ಯೆ 22ಕ್ಕೆ ಡಿ.27ರಂದು ಮತದಾನ ಜರುಗಲಿದೆ. ಈ ವಾರ್ಡ್ ವ್ಯಾಪ್ತಿಯ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ತಿಳಿಸಿದ್ದಾರೆ.
ಈ ವಾರ್ಡ್‌ನ ವ್ಯಾಪ್ತಿಯ ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಈ ವ್ಯಾಪ್ತಿಯ ಎಲ್ಲ ಸಾರ್ವಜನಿಕ ಉದ್ದಿಮೆಗಳು, ವ್ಯವಹಾರಿಕ ಸಂಸ್ಥೆಗಳು, ಖಾಸಗಿ ಕಂಪನಿಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುಂತೆ ವೇತನ ಸಹಿತ ರಜೆ ನೀಡಲು ಸರ್ಕಾರದ ಅಧಿಸೂಚನೆಯಲ್ಲಿ ಆದೇಶಿಸಿದೆ.
ತುರ್ತು ಸೇವೆಗಳಿಗೆ ರಜೆ ಅನ್ವಯಿಸುವುದಿಲ್ಲ. ಆದರೂ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಂಬಂಧಿಸಿದ ಇಲಾಖೆ ಹಾಗೂ ಸಂಘ-ಸಂಸ್ಥೆಗಳು ವ್ಯವಸ್ಥೆ ಮಾಡಬೇಕು ಎಂದು ಎಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.