

ಹಾವೇರಿ: ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಹಲವು ಮನೆಗಳಿಗೆ ಹಾನಿಯಾಗಿದ್ದು, ಶುಕ್ರವಾರ ಒಂದೇ 90 ಮನೆಗಳು ಹಾನಿಗೀಡಾಗಿವೆ. ಏಪ್ರಿಲ್ 1ರಿಂದ ಈವರೆಗೆ ಒಟ್ಟು 243 ಮನೆಗಳು ಹಾನಿಗೀಡಾಗಿವೆ.
ಈ ಪೈಕಿ ಸವಣೂರ ತಾಲೂಕಿನ ಮಾದಾಪುರದಲ್ಲಿ ಮೂರು ಜನರನ್ನು ಬಲಿ ಪಡೆದ ಮನೆ ಸಂಪೂರ್ಣವಾಗಿ ಬಿದ್ದಿದ್ದು, ಉಳಿದಂತೆ 6 ಮನೆಗಳು ತೀವ್ರವಾಗಿ ಹಾನಿಗೀಡಾಗಿದ್ದು, 154 ಮನೆಗಳು ಭಾಗಶಃ ಹಾನಿಗೀಡಾಗಿವೆ. 237 ಮನೆಗಳು ಭಾಗಶಃ ಹಾಳಾಗಿವೆ.
7.78ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿ:
ಸತತ ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳು ಜಲಾವೃತಗೊಂಡಿವೆ. ಜು.20ರವರೆಗೆ ಜಿಲ್ಲೆಯಲ್ಲಿ 7.78 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ 14 ರೈತರ ತೋಟಗಾರಿಕೆ ಬೆಳೆ ಹಾನಿಯಾಗಿದೆ. 7.78 ಹೆಕ್ಟೇರ್‌ನಲ್ಲಿ 5.18 ಹೆಕ್ಟೇರ್ ಬಾಳೆ, ಸುಮಾರು 2 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳ್ಳುಳ್ಳಿ ಮತ್ತು ಸುಮಾರು 0.60 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಹಾಗಲಕಾಯಿ ಬೆಳೆ ನೆಲಕಚ್ಚಿಕೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಲವು ಸೇತುವೆ ಮುಳುಗಡೆ
ಮಲೆನಾಡು, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯ ಹಲವು ಸೇತುವೆಗಳು ಮುಳುಗಡೆಯಾಗಿದ್ದು, ವಾಹನಗಳ ಸಂಚಾರ ಬಂದ್ ಆಗಿದೆ. ಹತ್ತಾರು ಕಡೆಗಳಲ್ಲಿ ರಸ್ತೆಮಾರ್ಗ ಬಂದ್ ಆಗಿವೆ.
ಹಾವೇರಿ ತಾಲೂಕಿನ ನಾಗನೂರು- ಕೂಡಲ ಮತ್ತು ಕರ್ಜಗಿ- ಚಿಕ್ಕಮುಗದೂರ, ಸವಣೂರ ತಾಲೂಕಿನ ಕಳಸೂರು- ಕೋಳೂರ, ಹಿರೇಮರಳಿಹಳ್ಳಿ-ಕೊಣನತಂಬಿಗಿ, ಸೇತುವೆಗಳು ಮುಳುಗಡೆಯಾಗಿವೆ. ಚಿಕ್ಕಮುಗದೂರು- ಕರ್ಜಗಿ, ಹಾನಗಲ್ಲ ತಾಲೂಕಿನಲ್ಲಿ ಆಡೂರ -ತುಮರಿಕೊಪ್ಪ, ಬಾಳಂಬೀಡ -ಲಕಮಾಪುರ, ರಾಣೆಬೆನ್ನೂರ ತಾಲೂಕಿನಲ್ಲಿ ಮುಷ್ಟೂರ -ಹೊಳೆಆನ್ವೇರಿ, ಅಂತರವಳ್ಳಿ -ಲಿಂಗದಹಳ್ಳಿ, ಹಿರೇಮಾಗನೂರ ಕೋಣನತೆಲಿ, ರಟ್ಟೀಹಳ್ಳಿ -ಯಲಿವಾಳ ಸೇತುವೆಗಳು, ರಸ್ತೆಗಳು ಮುಳುಗಿವೆ. ಈ ಎಲ್ಲ ಗ್ರಾಮಗಳಿಗೆ ಪರ್ಯಾಯ ಮಾರ್ಗಗಳು ಇರುವುದರಿಂದ ಯಾವುದೇ ಸಮಸ್ಯೆ ಆಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ
ಪ್ರಸ್ತುತ ರಸ್ತೆ ಸಂಪರ್ಕ ಕಡಿತಗೊಂಡ ಗ್ರಾಮಗಳಿಗೆ ಪರ್ಯಾಯ ಮಾರ್ಗ ಇದ್ದು, ಅಲ್ಲಿ ಸಂಚರಿಸುವಂತೆ ಆಯಾ ಗ್ರಾಮಸ್ಥರಿಗೆ ಜಿಲ್ಲಾಡಳಿತ ಕ್ರಮವಹಿಸಿದೆ. ಆದರೂ ನದಿ ಪ್ರವಾಹದಿಂದ ಮುಳುಗಡೆಯಾದ ಸೇತುವೆಗಳ ಮೇಲೆ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಓಡಾಟಕ್ಕೆ ನಿರ್ಭಂಧಿಸಲಾಗಿದೆ. ಅಲ್ಲದೇ ಆಯಾ ಗ್ರಾಮ ಪಂಚಾಯಿತಿಗಳ ಮೂಲಕ ಗ್ರಾಮಗಳಲ್ಲಿ ನದಿಪಾತ್ರದ ಪ್ರದೇಶಕ್ಕೆ ತೆರಳದಂತೆ ಡಂಗುರ ಸಾರಿಸಿ ಜಾಗೃತಿ ಮೂಡಿಸಲು ಕ್ರಮವಹಿಸಿದೆ.
ಕೋಟ್
ನಿರಂತರವಾದ ಮಳೆಯಿಂದಾಗಿ ಸವಣೂರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆ ಕುಸಿದು ಓರ್ವ ಮಹಿಳೆ, ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಈ ಕುಟುಂಬಕ್ಕೆ ಈಗಾಗಲೇ ತಲಾ 5 ಲಕ್ಷ ರೂ.ನಂತೆ 15 ಲಕ್ಷ ರೂ. ಪರಿಹಾರ ತಲುಪಿಸಲಾಗಿದೆ. ಪ್ರವಾಹ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಡಿಸಿ ಪಿಡಿ ಖಾತೆಯಲ್ಲಿ 16.43 ಕೋಟಿ ರೂ., ತಹಸೀಲ್ದಾರರ ಬಳಿ 5.75 ಕೋಟಿ ರೂ. ಸೇರಿ ಒಟ್ಟು 22.18 ಕೋಟಿ ರೂ. ಲಭ್ಯವಿದ್ದು, ತುರ್ತು ಪರಿಹಾರಕ್ಕೆ ಯಾವುದೇ ಸಮಸ್ಯೆ ಇಲ್ಲ.
- ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ