ಖಾಸಗಿ ಕೊಳವೆಬಾವಿ, ಮೇವಿನ ಮಾಹಿತಿ ನೀಡಿ; ಮಳೆ, ಗಾಳಿ, ಸಿಡಿಲಿನ ಅವಘಡಗಳಿಗೆ ತಕ್ಷಣವೇ ಸ್ಪಂದಿಸಿ; ಡಿಸಿ ರಘುನಂದನ ಮೂರ್ತಿ ಸೂಚನೆ

18 HVR 3 A
Published on

ಹಾವೇರಿ: ಜಿಲ್ಲೆಯ ಪ್ರತಿ ತಾಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಪ್ರಸ್ತುತ ಕುಡಿಯುವ ನೀರಿನ ಪೂರೈಕೆ, ಕೊಳವೆಬಾವಿಗಳ ನೀರಿನ ಮಟ್ಟ ಹಾಗೂ ನದಿ ಹಾಗೂ ಕೆರೆಗಳಲ್ಲಿ ನೀರು ಸಂಗ್ರಹ ಕುರಿತಂತೆ ಶುಕ್ರವಾರ ಸಂಜೆಯೊಳಗಾಗಿ ಜಿಲ್ಲೆಯ ಎಲ್ಲ ತಹಸೀಲ್ದಾರರು ಹಾಗೂ ಗ್ರಾಮೀಣ ನೀರು ಸರಬರಾಜು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರು ವಿಸ್ತೃತ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಂಜೆ ಬೇಸಿಗೆ ಕುಡಿಯುವ ನೀರು ಪೂರೈಕೆ ಹಾಗೂ ಜಾನುವಾರುಗಳ ಮೇವಿನ ಸ್ಥಿತಿಗತಿ ಹಾಗೂ ಮುಂಗಾರು ಮಳೆ-ಗಾಳಿ ಹಾಗೂ ಗುಡುಗು-ಸಿಡಿಲಿನ ಅವಘಡಗಳ ಮುನ್ನೆಚ್ಚರಿಕೆ ಕುರಿತಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಉಪವಿಭಾಗಾಧಿಕಾರಿಗಳು ಶುಕ್ರವಾರ ಸಂಜೆಯೊಳಗಾಗಿ ತಾಲೂಕು ಟಾಸ್ಕ್‌ಪೋರ್ಸ್ ಸಭೆ ನಡೆಸಿ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ಬೇಸಿಗೆ ಕುಡಿಯುವ ನೀರು ಸರಬರಾಜು ಮಾಡಲು ಬಾಡಿಗೆ ಪಡೆದಿರುವ ಕೊಳವೆಬಾವಿಗಳ ಬಾಕಿ ಹಣವನ್ನು ವಾರದೊಳಗೆ ಪಾವತಿ ಮಾಡಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಬಾಡಿಗೆ ಪಡೆದಿರುವ ಖಾಸಗಿ ಕೊಳವೆಬಾವಿಗಳ ನಿಖರ ಮಾಹಿತಿ ಸಲ್ಲಿಸುವಂತೆ ಸೂಚಿಸಿದರು.
ಮುಂಗಾರು ಮಳೆ:
ಮುಂಗಾರು ಮಳೆಯ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲ ತಾಲೂಕು ಆಡಳಿತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕೆಲವೆಡೆ ಮಳೆಯಾಗಿದೆ. ಗಾಳಿ, ಗುಡುಗು- ಸಿಡಿಲಿನ ಅವಘಡಗಳಿಗೆ ತಕ್ಷಣ ಸ್ಪಂದಿಸಬೇಕು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಗುಡುಗು-ಸಿಡಿಲಿಗೆ ಜೀವಹಾನಿ ಸಂಭವಿಸಿದಲ್ಲಿ ತಕ್ಷಣವೇ ತೆರಳಿ ನಿಯಮಾನುಸಾರ ಪ್ರಕ್ರಿಯೆ ಕೈಗೊಂಡು ಪರಿಹಾರ ಬಿಡುಗಡೆಗೆ ಕ್ರಮಕೈಗೊಳ್ಳಲು ಸೂಚನೆ ನೀಡಿದರು.
ಚುನಾವಣಾ ಕಾರಣ ಹೇಳದೇ ಗುಡುಗು-ಸಿಡಿಲಿಗೆ ಮನೆಹಾನಿ, ಜಾನುವಾರುಗಳ ಹಾನಿ ಸಂಭವಿಸಿದ್ದಲ್ಲಿ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಬೇಕು. ಜಾನುವಾರು ಹಾನಿಯಾದಲ್ಲಿ ತಕ್ಷಣವೇ ಪೋಸ್ಟ್‌ಮಾಟಂ ನಡೆಸಿ 24 ತಾಸಿನಲ್ಲಿ ಪರಿಹಾರ ನೀಡುವ ನಿಟ್ಟಿನಲ್ಲಿ ತ್ವರಿತ ಕ್ರಮವಹಿಸಲು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ಮುಂಗಾರು ಮಳೆ ಮುನ್ನ ಎಲ್ಲ ಗ್ರಾಮ ಪಂಚಾಯಿತಿಗಳು ಗ್ರಾಮಗಳಲ್ಲಿ ಡ್ರೈನೇಜ್‌ಗಳನ್ನು ಸ್ವಚ್ಛಗೊಳಿಸಬೇಕು. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗದಂತೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳ ಕಟ್ಟಡ ಮೇಲ್ಛಾವಣಿಗಳನ್ನು ಸ್ವಚ್ಛಗೊಳಿಸಿ ಸರಾಗವಾಗಿ ಮಳೆ ನೀರು ಹರಿದು ಹೋಗುವಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಎಲ್ಲೂ ಟ್ಯಾಂಕರ್ ಬಳಸುತ್ತಿಲ್ಲ
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಇರುವುದಿಲ್ಲ. ಎಲ್ಲೂ ಟ್ಯಾಂಕರ್ ಬಳಸುತ್ತಿಲ್ಲ. ಸರ್ಕಾರಿ ಕೊಳವೆಬಾವಿಗಳ ನೀರಿನ ಪ್ರಮಾಣ ಕಡಿಮೆಯಾದ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಹಾನಗಲ್ಲ ಪಟ್ಟಣಕ್ಕೆ ಧರ್ಮಾ ಜಲಾಶಯದ ನೀರು, ರಾಣೆಬೆನ್ನೂರ ಹಾಗೂ ಹಾವೇರಿ ನಗರಕ್ಕೆ ತುಂಗಾಭದ್ರಾ ನದಿಯ ನೀರು ಪೂರೈಸಲಾಗುತ್ತಿದೆ. ನದಿ ನೀರು ಖಾಲಿಯಾದ ಮೇಲೆ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಅಧಿಕಾರಿಗಳು ಡಿಸಿ ಅವರಿಗೆ ಮಾಹಿತಿ ನೀಡಿದರು.
ಮನೆಹಾನಿಯಾದರೆ ಸ್ಥಳಕ್ಕೆ ಹೋಗಿ
ಮಳೆಯಿಂದ ಮನೆ ಹಾನಿಯಾದರೆ ಗ್ರಾಮ ಲೆಕ್ಕಾಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಹಾಯಕ ಇಂಜನೀಯರ್ ಒಳಗೊಂಡ ತ್ರಿಸದಸ್ಯ ಸಮಿತಿ ಸ್ಥಳಕ್ಕೆ ಭೇಟಿ ಜಿಯೋ ಟ್ಯಾಗ್ ಫೋಟೋ ತೆಗೆದು, ಹಾನಿಯ ಅಂದಾಜು ವರದಿ ಮಾಡಬೇಕು. ವಿಳಂಬ ಮಾಡಬಾರದು, ಮನೆಹಾನಿ ವಿಚಾರದಲ್ಲಿ ಹಳೆಯ ತಪ್ಪುಗಳು ಪನರಾವರ್ತನೆಯಾಗಬಾರದು. ಈ ಬಾರಿ ಮತ್ತೆ ತಪ್ಪು ಮಾಡಿದರೆ ಪಿಡಿಒ, ವಿಎ ಹಾಗೂ ಸಹಾಯಕ ಅಭಿಯಂತರರನ್ನು ಹೊಣೆ ಮಾಡಲಾಗುವುದು ಎಂದು ಡಿಸಿ ಎಚ್ಚರಿಸಿದರು.
15 ದಿನದೊಳಗೆ ಡ್ರೈನೇಜ್ ಕ್ಲಿನ್
ನಗರ ಪ್ರದೇಶಗಳಲ್ಲಿ ಎಲ್ಲ ಡ್ರೈನೇಜ್‌ಗಳನ್ನು 15 ದಿನದೊಳಗಾಗಿ ಸ್ವಚ್ಛಗೊಳಿಸಿ, ಸರಾಗವಾಗಿ ಮಳೆ ನೀರು ಹರಿದು ಹೋಗುವಂತೆ ಕ್ರಮವಹಿಸಿ. ಮುಂಗಾರು ಮಳೆಯಿಂದ ಡ್ರೈನೇಜ್ ತುಂಬಿ ಅವಘಡಕ್ಕೆ ಕಾರಣವಾಗಬಾರದು. ನಗರದ ತಗ್ಗು ಪ್ರದೇಶಗಳನ್ನು ಗುರುತಿಸಿಕೊಂಡು ಮಳೆ ನೀರಿನಿಂದ ತೊಂದರೆಗೊಳಗಾಗುವ ಸಂದರ್ಭದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸೋರುವ ಮತಗಟ್ಟೆ ಪರಿಶೀಲಿಸಿ
ಮಳೆಯಿಂದ ಮತದಾನದಕ್ಕೆ ಯಾವುದೇ ತೊಂದರೆಯಾಗದಂತೆ ಪ್ರಸ್ತುತ ಜಿಲ್ಲೆಯಲ್ಲಿ ಮಳೆಯಾಗಿರುವುದರಿಂದ ಎಲ್ಲ ಮತಗಟ್ಟೆಗಳನ್ನು ಪರಿಶೀಲಿಸಿ. ಎಲ್ಲೆಲ್ಲಿ ಸೋರಿಕೆ ಕಂಡುಬಂದಿದೆ ದುರಸ್ತಿಗೊಳಿಸಿ. ಕಿಟಕಿಯಿಂದ ಕೊಠಡಿಯೊಳಗೆ ನೀರು ಹರಿದುಬಂದರೆ ದುರಸ್ತಿಗೆ ಈಗಿನಿಂದಲೇ ಕ್ರಮವಹಿಸಿ. ಪರ್ಯಾಯ ವಿದ್ಯುತ್ ವ್ಯವಸ್ಥೆ ಮಾಡಿಕೊಳ್ಳಿ ಎಂದು ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಸೀಲ್ದಾರರಿಗೆ ಡಿಸಿ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net