ಕೋವಿಡ್ ಭಯ ಬೇಡ, ಮುನ್ನೆಚ್ಚರಿಕೆ ವಹಿಸಿ; ಡಿಸಿ ರಘುನಂದನ ಮೂರ್ತಿ

Published on

ಹಾವೇರಿ: ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ಕಂಡುಬಂದಿಲ್ಲ. ಕೋವಿಡ್ ನಿರ್ವಹಣೆಗೆ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಅಂತರವನ್ನು ಕಾಯ್ದುಕೊಳ್ಳಬೇಕು. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಇತರೆ ಗಂಭೀರ ಖಾಯಿಲೆಯಿಂದ ಬಳಲುತ್ತಿರುವವರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಬೇಕು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರಿ ಆಸ್ಪತ್ರೆಗಳ 1,024 ಹಾಗೂ ಖಾಸಗಿ ಸ್ಪತ್ರೆಗಳ 340 ಸೇರಿ ಒಟ್ಟು 1364 ಬೆಡ್‌ಗಳು ಹಾಗೂ 183 ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ 63 ಹಾಗೂ ಖಾಸಗಿ ಎರಡು ಸೇರಿ 66 ಐಸಿಯು ಸಹಿತ ವೆಂಟಿಲೇಟರ್ ಬೆಡ್ ಕಾಯ್ದಿರಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಸುವ್ಯಸ್ಥೆಯಲ್ಲಿದ್ದು, 995 ಆಕ್ಸಿಜನಲ್ ಸಿಲಿಂಡರ್‌ಗಳು ಲಭ್ಯವಿವೆ. ಆರ್.ಟಿಪಿಸಿ 41 ಹಾಗೂ ರ‌್ಯಾಟ್ 29 ಸೇರಿ 70 ಪರೀಕ್ಷೆಗಳ ಗುರಿ ನೀಡಲಾಗಿದ್ದು, ಪ್ರತಿದಿನ 200 ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಡಿ.25ರಿಂದ ಜ.1ರವರೆಗೆ 142 ರ‌್ಯಾಟ್ ಹಾಗೂ 1,302 ಆರ್‌ಟಿಪಿಸಿಆರ್ ಸೇರಿ ಒಟ್ಟು 1,444 ಪರೀಕ್ಷೆ ಮಾಡಲಾಗಿದೆ. ಜಿಲ್ಲೆಗೆ 780 ಬೂಸ್ಟರ್ ಡೋಸ್ ಲಸಿಕೆ ಸರಬರಾಜಾಗಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net