

ಹಾವೇರಿ: ಡೆಂಘೆ ಜ್ವರ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದ್ದು, ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ವಾರ್ ರೂಮ್ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗುತ್ತಿದೆ ಎಂದು ನೂತನ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ದೇವಗಿರಿಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನ ನಂತರ ಹಾವೇರಿ ಜಿಲ್ಲೆಯಲ್ಲೇ ಹೆಚ್ಚು ಡೆಂಘೆ ಕೇಸ್‌ಗಳು ಪತ್ತೆಯಾಗಿವೆ. ಈವರೆಗೆ 513 ಪ್ರಕರಣ ಪತ್ತೆಯಾಗಿದ್ದು, 506 ರೋಗಿಗಳು ಗುಣಮುಖರಾಗಿದ್ದಾರೆ. ಉಳಿದ ಮೂವರು ಜಿಲ್ಲಾಸ್ಪತ್ರೆಯಲ್ಲಿ, ಒಬ್ಬರು ಕಿಮ್ಸ್ ಹಾಗೂ ಒಬ್ಬರು ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಹಾನಗಲ್ಲ, ಹಾವೇರಿ ಹಾಗೂ ಹಿರೇಕೆರೂರ ತಾಲೂಕುಗಳಲ್ಲಿ ಹೆಚ್ಚಿನ ಕೇಸ್‌ಗಳು ಕಂಡುಬಂದಿವೆ. ಶೇ.65ರಷ್ಟು 16 ವರ್ಷದೊಳಗಿನ ಮಕ್ಕಳಲ್ಲಿ, ಶೇ.75ರಷ್ಟು ಗ್ರಾಮೀಣ ಭಾಗದಲ್ಲಿ ಹಾಗೂ ಶೇ.25ರಷ್ಟು ನಗರ ಪ್ರದೇಶದಲ್ಲಿ ಡೆಂಘೆ ಕಂಡುಬರುತ್ತಿದೆ ಎಂದರು.
ಡಿಸಿ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗುತ್ತಿದ್ದು, ಅದರಲ್ಲಿ ಮೆಡಿಕಲ್ ಕಾಲೇಜ್ ಡೀನ್, ಡಿಎಚ್‌ಒ, ಡಿಡಿಪಿಐ, ಇತರರು ಇರುತ್ತಾರೆ. ಡೆಂಘೆ ಚಿಕಿತ್ಸೆಗಿಂತ ಅದನ್ನು ತಡೆಗಟ್ಟುವುದು ಮುಖ್ಯ. ಸೋಂಕಿತ ಸೊಳ್ಳೆ ನಿಯಂತ್ರಿಸಲು ಆಶಾ, ಆರೋಗ್ಯ ಇಲಾಖೆ ಸಿಬ್ಬಂದಿ ಜಿಲ್ಲೆಯ ಪ್ರತಿ ಮನೆ ಮನೆಗೆ ತೆರಳಿ ಕರಪತ್ರ ಹಂಚಿ ಜಾಗೃತಿ ಮೂಡಿಸುತ್ತಿದ್ದಾರೆ. ಲಾರ್ವಾ ಸರ್ವೆಗೆ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ತಲಾ 200 ರೂ. ಕೊಟ್ಟು ಸಿಬ್ಬಂದಿ ನೇಮಿಸಿಕೊಳ್ಳಲಾಗುವುದು ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಡೆಂಘೆ ರೋಗಿಗಳಿಗಾಗಿ ಪ್ರತ್ಯೇಕ ವಾರ್ಡ್ ಮಾಡಲಾಗುವುದು. ಬಿಪಿಎಲ್, ಎಪಿಎಲ್ ಕಾರ್ಡ್ ಉಳ್ಳವರಿಗೂ ಉಚಿತ ಚಿಕಿತ್ಸೆ ನೀಡಲಾಗುವುದು. ಸಾರ್ವಜನಿಕರು ಸ್ವಚ್ಛತೆ ಕಡೆಗೆ ಗಮನಕೊಡಬೇಕು. ನೀರು ಶೇಖರಣೆ ಮಾಡಿದ ಪರಿಕರಗಳನ್ನು ಕಡ್ಡಾಯವಾಗಿ ಮುಚ್ಚಿ ಇಡಬೇಕು. ಆಗಾಗ ಸ್ವಚ್ಛಗೊಳಿಸಬೇಕು ಎಂದರು.
ಜಿಪಂ ಸಿಇಒ ಅಕ್ಷಯ ಶ್ರೀಧರ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಸ್ವಚ್ಛತೆ, ಜಾಗೃತಿ ಕಾರ್ಯ ನಡೆದಿದೆ. ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸಿ ಡೆಂಘೆ ತಡೆಗೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದರು.
ಹಾಟ್‌ಸ್ಪಾಟ್ ಗುರುತು
ಡೆಂಘೆ ಪ್ರಕರಣಗಳು ಪತ್ತೆಯಾದ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಹಾಟ್‌ಸ್ಪಾಟ್ ಎಂದು ಗುರುತಿಸಲಾಗುವುದು. ಅಲ್ಲಿ ಲಾರ್ವಾ ನಾಶಕ ಬಳಸಲಾಗುವುದು. ಜ್ವರ ಇದ್ದವರ ಪತ್ತೆ ಮಾಡುವ ಕೆಲಸ ಮಾಡಲಾಗುವುದು. ಬಡ ಕುಟುಂಬಗಳಿರುವ ಕಡೆಗಳಲ್ಲಿ ಸೊಳ್ಳೆ ನಿರೋಧಕ ಬೇವಿನ ಎಣ್ಣೆ, ಇತರ ಔಷಧ ವಿತರಿಸಲಾಗುವುದು ಎಂದು ಡಿಸಿ ಹೇಳಿದರು.