ಶಿಗ್ಗಾಂವಿ ಉಪಚುನಾವಣೆ; ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಸಜ್ಜು; ಡಿಸಿ ಡಾ.ವಿಜಯಮಹಾಂತೇಶ ಹೇಳಿಕೆ

16 HVR 3
Published on

ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಭಾರತ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಅ.15ರಿಂದ ನ.25ರವರೆಗೆ ಜಿಲ್ಲೆಯಾದ್ಯಂತ ನೀತಿಸಂಹಿತೆ ಜಾರಿಯಾಗಲಿದೆ. ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ವಿವರಿಸಿದರು.
ಇಲ್ಲಿನ ದೇವಗಿರಿಯ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಶಿಗ್ಗಾಂವಿ ಉಪಚುನಾವಣೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅ.15ರಿಂದ ನವೆಂಬರ್ 25ರವರೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, ಈ ಅವಧಿಯಲ್ಲಿ ನೀತಿಸಂಹಿತೆ ಜಾರಿಯಲ್ಲಿ ಇರಲಿದೆ. ಚುನಾವಣಾ ಅಧಿಕಾರಿಯಾಗಿ ಸವಣೂರ ಉಪ ವಿಭಾಗಾಧಿಕಾರಿ ಮಹ್ಮದ್ ಖಿಜರ್ ಹಾಗೂ ಸಹಾಯಕ ಚುನಾವಣಾ ಅಧಿಕಾರಿಯಾಗಿ ಶಿಗ್ಗಾಂವಿ ತಹಸೀಲ್ದಾರ್ ಸಂತೋಷ ಹಿರೇಮಠ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಶಿಗ್ಗಾಂವಿ ತಹಸೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸ್ವೀಕಾರ ಮಾಡಲಾಗುವುದು. ಅ.18ರಂದು ಅಧಿಸೂಚನೆ ಪ್ರಕಟಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಅ.25ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಅ.28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅ.30 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ನ.13ರಂದು ಮತದಾನ ನಡೆಯಲಿದೆ. ನ.23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ನ.25ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ಸುಗಮ ಚುನಾವಣೆ ಹಾಗೂ ಮಾದರಿ ನೀತಿ ಸಂಹಿತೆ ಪಾಲನೆಗೆ 23 ಸೆಕ್ಟರ್ ಅಧಿಕಾರಿಗಳ ತಂಡ ರಚಿಸಲಾಗಿದೆ. 2 ವಿಡಿಯೋ ಸರ್ವಲೆನ್ಸ್ ತಂಡಗಳು, ಒಂದು ವಿಡಿಯೋ ಪರಿಶೀಲನೆ ತಂಡ, ಎಂಟು ಪ್ಲೈಯಿಂಗ್ ಸ್ಕ್ವಾಡ್, ಒಂದು ವೆಚ್ಚ ಪರಿಶೀಲನಾ ತಂಡ, 18 ಎಸ್.ಎಸ್.ಟಿ. ತಂಡ ರಚಿಸಲಾಗಿದೆ ಎಂದು ತಿಳಿಸಿದರು.
492 ಬ್ಯಾಲೆಟ್ ಯುನಿಟ್, ವಿವಿ ಪ್ಯಾಟ್, ಕಂಟ್ರೋಲ್ ಯುನಿಟ್‌ಗಳು ಈಗಾಗಲೇ ಸಿದ್ಧಗೊಂಡಿದ್ದು, ರಾಜಕೀಯ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ರ‌್ಯಾಂಡಮೈಸ್ ಮಾಡಿ ಶಿಗ್ಗಾಂವಿ ಕ್ಷೇತ್ರಕ್ಕೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಇದ್ದರು.
ಮತದಾರರ ವಿವರ:
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ 2024ಕ್ಕೆ ಅನ್ವಯವಾಗುವಂತೆ 1,21,067 ಪುರುಷರು, 1,15,717 ಮಹಿಳೆಯರು, 6 ತೃತೀಯ ಲಿಂಗಿಗಳು ಸೇರಿ ಒಟ್ಟು 2,36,790 ಮತದಾರರು ಇದ್ದಾರೆ.
ಹಿರಿಯರು, ವಿಶೇಷ ಚೇತನರಿಗೆ ವಿಶೇಷ ವ್ಯವಸ್ಥೆ:
85 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 2,802 ಹಿರಿಯ ಮತದಾರರು, 5,251 ವಿಶೇಷ ಚೇತನರು, 144 ಸೇವಾ ಮತದಾರರು ಹಾಗೂ 18 ರಿಂದ 19 ವರ್ಷದೊಳಗಿನ 9,683 ನವಮತದಾರರಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದರು.
ಮತಗಟ್ಟೆ, ಸಿಬ್ಬಂದಿ ವಿವರ:
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ 241 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಗೆ ಸಿಬ್ಬಂದಿ ನಿಯೋಜಿಸಿ ಸೂಕ್ತ ತರಬೇತಿ ನೀಡಲಾಗುವುದು. ಸುಗಮ ಚುನಾವಣೆ ಜರುಗಿಸಲು 265 ಮತಗಟ್ಟೆ ಅಧಿಕಾರಿಗಳು, 265 ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ಹಾಗೂ 530 ಪಿಒ ಗಳು ಸೇರಿದಂತೆ 1,060 ಸಿಬ್ಬಂದಿ ನಿಯೋಜಿಸಲಾಗಿದೆ. ಹಾವೇರಿ, ಬ್ಯಾಡಗಿ ಹಾಗೂ ಹಾನಗಲ್ಲ ಕ್ಷೇತ್ರದ ಸಿಬ್ಬಂಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗುವುದು. ಮೊದಲ ಹಂತದ ತರಬೇತಿ ಆಯಾ ತಾಲೂಕು ಕೇಂದ್ರ ಸ್ಥಾನದಲ್ಲಿ ಜರುಗಲಿದೆ. 2ನೇ ಹಂತದ ತರಗತಿ ಶಿಗ್ಗಾಂವಿಯಲ್ಲಿ ಜರುಗಲಿದೆ ಎಂದರು ಡಿಸಿ.
40 ಲಕ್ಷ ಅಭ್ಯರ್ಥಿ ವೆಚ್ಚ :
ಅಭ್ಯರ್ಥಿಯ ಚುನಾವಣಾ ವೆಚ್ಚ 40 ಲಕ್ಷ ರೂ. ಮಿತಿ ನಿಗದಿಪಡಿಸಲಾಗಿದೆ.
18 ಚೆಕ್‌ಪೋಸ್ಟ್ ಸ್ಥಾಪನೆ
ಬ್ಯಾಡಗಿ ಹೊರತುಪಡಿಸಿ ಜಿಲ್ಲೆಯಾದ್ಯಂತ ಸಿಸಿಟಿವಿ ಕಣ್ಗಾವಲಲ್ಲಿ 18 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು. ಹಾನಗಲ್ಲ ಕ್ಷೇತ್ರದ ಕೊಪ್ಪರಸಿಕೊಪ್ಪ, ಗೊಂದಿ, ಹಳ್ಳಿಬೈಲ್, ಸಮ್ಮಸಗಿ, ಶಿಗ್ಗಾಂವಿ ಕ್ಷೇತ್ರದ ತಡಸ, ವಡ್ಡಗಟ್ಟಿ, ರಾಮನಕೊಪ್ಪ, ಕೋಣನಕೇರಿ, ಪಾಣಿಗಟ್ಟಿ, ಹಾವೇರಿ ಕ್ಷೇತ್ರದ ಯಲವಿಗಿ, ತೆರದಹಳ್ಳಿ, ಕಂಚಾರಗಟ್ಟಿ, ಹಿರೇಕೆರೂರ ಕ್ಷೇತ್ರದ ಕೊಡಮಗ್ಗಿ, ಹಳ್ಳೂರ, ಹುಲಬಿಕೊಂಡ, ಜಾವಳ್ಳಿ, ರಾಣೆಬೆನ್ನೂರ ಕ್ಷೇತ್ರದ ಮಾಕನೂರ ಕ್ರಾಸ್, ತುಮ್ಮಿನಕಟ್ಟಿ, ಹರನಗಿರಿ ಬ್ರಿಜ್ಡ್‌ನಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು. ದಿನದ 24 ಗಂಟೆ ಕಾರ್ಯನಿರ್ವಹಿಸುವಂತೆ ಮೂರು ತಂಡಗಳನ್ನು ರಚಿಸಲಾಗಿದೆ. ಪೊಲೀಸ್, ಕಂದಾಯ, ಅಬಕಾರಿ ಸಿಬ್ಬಂದಿಯನ್ನು ಚೆಕ್‌ಪೋಸ್ಟ್‌ಗೆ ನಿಯೋಜಿಸಲಾಗಿದೆ ಎಂದು ಡಿಸಿ ವಿವರಿಸಿದರು.
ಮತದಾನ ಪ್ರಮಾಣ ಹೆಚ್ಚಳಕ್ಕೆ ಸಿದ್ಧತೆ
ಸ್ವೀಪ್ ಚುಟುವಟಿಕೆ ಮೂಲಕ ಮತದಾನ ಪ್ರಮಾಣ ಹೆಚ್ಚಿಸಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ 133 ಮತದಾರರ ಸಾಕ್ಷರತಾ ಸಂಘಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಕೇಂದ್ರಕ್ಕೆ ಒಂದರಂತೆ 241 ಚುನಾವಣಾ ಜಾಗೃತಿ ಸಂಘಗಳನ್ನು ರಚಿಸಲಾಗಿದೆ. ವಿವಿಧ ಕಾಲೇಜುಗಳಲ್ಲಿ 24 ಕ್ಯಾಂಪಸ್ ಅಂಬಾಸಿಡರ್‌ಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ತಿಳಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.79.94ರಷ್ಟು ಮತದಾನವಾಗಿದೆ. ಶೇ.81ರಷ್ಟು ಪುರುಷರು ಹಾಗೂ ಶೇ.77.82ರಷ್ಟು ಮಹಿಳಾ ಮತದಾನವಾಗಿದೆ. ಮತದಾನ ಪ್ರಮಾಣ ಕಡಿಮೆಯಾದ 20 ಬೂತ್‌ಗಳನ್ನು ಗುರುತಿಸಿ, ಪ್ರತಿ ಮತ ಕೇಂದ್ರಗಳಿಗೆ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಿ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಐದು ಸಖಿ ಮತಗಟ್ಟೆ, ವಿಕಲಚೇತನ ಸ್ನೇಹಿ, ಯುವ ಮತದಾರರ ಹಾಗೂ ಥೀಮ್‌ಬೇಸ್ಡ್ ಮತಗಟ್ಟೆ ಸ್ಥಾಪಿಸಲಾಗುವುದು ಎಂದರು.
ಪೊಲೀಸ್ ಬಂದೋಬಸ್ತ್
ಪ್ರತಿ ಮತಗಟ್ಟೆಗೆ ಒಬ್ಬ ಮುಖ್ಯ ಪೇದೆ ಹಾಗೂ ಒಬ್ಬ ಹೋಂ ಗಾರ್ಡ್, ಸೂಕ್ಷ್ಮ ಮತಗಟ್ಟೆಗೆ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಹೋಂ ಗಾರ್ಡ್ ಸೇರಿದಂತೆ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಐದು ಕೆಎಸ್‌ಆರ್‌ಪಿ ತುಕಡಿ, ಮೂರು ಪ್ಯಾರಾ ಮಿಲಿಟರಿ ಪಡೆಗಳು ಸೇರಿದಂತೆ ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ. ಚೆಕ್‌ಪೋಸ್ಟ್, ಸೆಕ್ಟರ್ ತಂಡ, ವಿಡಿಯೋ ತಂಡಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ.ಶಿರಕೋಳ ತಿಳಿಸಿದರು.
ಕಂಟ್ರೋಲ್ ರೂಂ ಸ್ಥಾಪನೆ
ಉಪ ಚುನಾವಣೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ಸ್ವೀಕರಿಸಲು ಕಂಟ್ರೋಲ್ ರೂಂ ತೆರೆಯಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ 08375-200383 ಹಾಗೂ ಶಿಗ್ಗಾಂವಿಯಲ್ಲಿ 08378-222468 ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ 1950 ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಮಾಹಿತಿ ನಿಡಬಹುದಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net