ಪಟಾಕಿ ದುರಂತದ ವರದಿ ನೀಡಲು ಎಡಿಸಿ ತಂಡ ರಚನೆ; ಅಧಿಕೃತ ಲೈಸನ್ಸ್‌ದಾರರಿಗೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ; ಜಿಲ್ಲಾಧಿಕಾರಿ

2 HVR 7
Published on

ಹಾವೇರಿ: ಆಲದಕಟ್ಟಿಯಲ್ಲಿ ಸಂಭವಿಸಿದ ಪಟಾಕಿ ಅಗ್ನಿ ದುರಂತದ ಸಮಗ್ರ ತನಿಖೆಗಾಗಿ ಈಗಾಗಲೇ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರ ಅವರು, ಪರವಾನಗಿ, ಮಾಲೀಕರು, ದಾಸ್ತಾನು, ಅನುಮತಿ ಒಳಗೊಂಡಂತೆ ಎಲ್ಲ ಆಯಾಮದಲ್ಲಿ ತನಿಖೆಯಲ್ಲಿ ಮಾಹಿತಿ ಸಂಗ್ರಹಿಸಲಾಗುವುದು. ನಿಖರವಾದ ಮಾಹಿತಿ ಆಧಾರದ ಮೇಲೆ ಎಲ್ಲಿ ಲೋಪವಾಗಿದೆ ಎಂಬುದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಧಿಕಾರಿಗಳ ನೇತೃತ್ವದಲ್ಲಿ ಅನಧಿಕೃತವಾಗಿ ಪಟಾಕಿ ಮಾರಾಟ ಮತ್ತು ದಾಸ್ತಾನು ಕುರಿತಂತೆ ಜಿಲ್ಲೆಯಾದ್ಯಂತ ಪರಿಶೀಲನೆ ನಡೆಸಲಾಗಿದೆ. ಲೈಸನ್ಸ್ ಪಡೆಯದೇ ಮಾರಾಟ ಮಾಡುತ್ತಿರುವ 27 ಅಂಗಡಿಗಳನ್ನು ಸೀಜ್ ಮಾಡಲಾಗಿದೆ. ಇವರಿಗೆ ನೋಟೀಸ್ ಸಹ ನೀಡಲಾಗಿದೆ. ಸಮರ್ಪಕ ದಾಖಲೆ ಒದಗಿಸುವ ಮಾಲೀಕರಿಗೆ ಮಾತ್ರ ಮಾರಾಟಕ್ಕೆ ಅನುಮತಿ ನೀಡಲಾಗುವುದು. ಗಣೇಶನ ಹಬ್ಬಕ್ಕೆ ಪಟಾಕಿ ಮಾರಾಟಕ್ಕೆ ತೊಂದರೆಯಾಗದಂತೆ ಲೈಸನ್ಸ್‌ದಾರರಿಗೆ ಬಯಲು ಪ್ರದೇಶದಲ್ಲಿ ಜಾಗೆ ಹಾಗೂ ಮಾರಾಟ ಅವಧಿ ಹಾಗೂ ಸಮಯ ನಿಗದಿಪಡಿಸಿ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ಮಾತನಾಡಿ, ಆಲದಕಟ್ಟಿ ಪಟಾಕಿ ದುರಂತ ಕುರಿತಂತೆ ಎಫ್.ಐ.ಆರ್.ದಾಖಲಾಗಿದೆ. ಇಬ್ಬರನ್ನು ಬಂಧಿಸಲಾಗಿದ್ದು, ತಪ್ಪಿಸಿಕೊಂಡವರ ಪತ್ತೆಗಾಗಿ ಬಲೆ ಬೀಸಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಇತರ ಮಾಹಿತಿ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಉಪಸ್ಥಿತರಿದ್ದರು.
ಮಧ್ಯಂತರ ಬೆಳೆ ಪರಿಹಾರಕ್ಕೆ ಪ್ರಸ್ತಾವನೆ
ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೂನ್‌ನಲ್ಲಿ ಮಳೆ ಕಡಿಮೆಯಾಗಿದೆ, ಜುಲೈನಲ್ಲಿ ಉತ್ತಮ ಮಳೆಯಾಗಿದ್ದು, ಆಗಸ್ಟ್‌ನಲ್ಲಿ ಮಳೆ ಬಾರದೇ ಬರ ಪರಸ್ಥಿತಿ ಎದುರಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬೆಳೆ ವಿಮೆಯಡಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ ನಿರ್ಧರಿಸಿ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈಗಾಗಲೇ ವಿಮಾ ಕಂಪನಿ, ರೈತ ಮುಖಂಡರು, ಸಂಬಂಧಿಸಿದ ಇಲಾಖೆಗಳ ಸಭೆ ನಡೆಸಲಾಗಿದೆ. ಸದ್ಯ ಸರ್ವೇ ಕಾರ್ಯ ನಡೆದಿದ್ದು, ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ ಉಂಟಾದರೆ ಶೇ.25ರಷ್ಟು ಮಧ್ಯಂತರ ವಿಮಾ ಪರಿಹಾರ ಕೊಡಲು ಅವಕಾಶವಿದೆ. ಮುಂದಿನ ಅವಧಿಯಲ್ಲೂ ಮಳೆ ಬಾರದೇ ಹೋದರೆ ಇಳುವರಿ ಸಮೀಕ್ಷೆ ಆಧಾರದ ಮೇಲೆ ಅಂತಿಮ ವಿಮಾ ಪರಿಹಾರ ಮೊತ್ತವನ್ನು ನಿರ್ಧರಿಸಲಾಗುವುದು ಎಂದರು.
ಬರದಿಂದ ಬೆಳೆಹಾನಿ ಕುರಿತಂತೆ ಸರ್ಕಾರದ ಹಂತದಲ್ಲಿ ಪರಿಹಾರ ನಿರ್ಧಾರವಾಗಲಿದೆ. ಬರ ಪರಿಹಾರ ನಿಟ್ಟಿನಲ್ಲಿ ಜಿಲ್ಲೆಯ ಹಿರೇಕೆರೂರ, ರಟ್ಟಿಹಳ್ಳಿ, ಸವಣೂರಿನಲ್ಲಿ ಬೆಳೆ ಹಾನಿ ಸರ್ವೇ ನಡೆಸಲಾಗಿದೆ. ಶೇ.50ರಷ್ಟು ಮೀರಿ ಬೆಳೆಹಾನಿಯಾಗಿರುವ ವರದಿಯಾಗಿದೆ. ಸರ್ಕಾರಕ್ಕೆ ಈ ಕುರಿತು ಮಾಹಿತಿ ಸಲ್ಲಿಸಲಾಗಿದೆ. ಸರ್ಕಾರದ ಹಂತದಲ್ಲಿ ಬರ ಘೋಷಣೆಯಾಗಲಿದೆ ಎಂದು ಡಿಸಿ ವಿವರಿಸಿದರು.
ಅಕ್ರಮ ಮರಳು, ಕ್ವಾರಿ ಪರಿಶೀಲನೆ
ಅನಧಿಕೃತ ಕಲ್ಲು ಕ್ವಾರಿಗಳು ಹಾಗೂ ಕಲ್ಲು ಕ್ವಾರಿಗಳಲ್ಲಿ ಸುರಕ್ಷತೆ ಕ್ರಮಗಳ ಪರಿಶೀಲನೆಗಾಗಿ ತಹಶೀಲ್ದಾರ್, ಪರಿಸರ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡಕ್ಕೆ ಈಗಾಗಲೇ ಸೂಚಿಸಲಾಗಿದೆ. ಲೋಪ ಕಂಡುಬಂದ ಕ್ವಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ನದಿಯಲ್ಲಿ ನೀರು ಕಡಿಮೆಯಾಗಿ ಮರಳು ಕಂಡು ಪ್ರದೇಶದಲ್ಲಿ ತಪಾಸಣೆ ಬಿಗಿಗೊಳಿಸಲು ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದೆ ಎಂದು ಡಿಸಿ ಸೂಚಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net