254 ಗ್ರಾಮ, 54 ವಾರ್ಡುಗಳಲ್ಲಿ ನೀರಿನ ಸಮಸ್ಯೆ ಸಾಧ್ಯತೆ; ಬರ ನಿರ್ವಹಣೆಗೆ ಅನುದಾನ ಕೊರತೆ ಇಲ್ಲ; ಜಿಲ್ಲಾಧಿಕಾರಿ ರಘುನಂದನ ಮೂರ್ತಿ

2 HVR 3
Published on

ಹಾವೇರಿ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ 54 ವಾರ್ಡುಗಳು ಹಾಗೂ 254 ಗ್ರಾಮಗಳು ಸೇರಿ 308 ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ. ಅಂತಹ ಪ್ರದೇಶಗಳಿಗೆ ಖಾಸಗಿ ಕೊಳವೆಬಾವಿಗಳನ್ನು ಮುಂಚಿತವಾಗಿ ಗುರುತಿಸಿ ಪೂರೈಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೇಸಿಗೆ ಅವಧಿಯಲ್ಲಿ ಉಂಟಾಗುವ ಕುಡಿಯುವ ನೀರಿನ ತೊಂದರೆ ನಿವಾರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರು ಹಾಗೂ ಬರ ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ ಎಂದರು. ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ, ಕಾಗಿನೆಲೆ ಹಾಗೂ ರಾಮಗೊಂಡನಹಳ್ಳಿ ಸೇರಿ ಮೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಏಳು ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಅನುದಾನದಲ್ಲಿ ಹೊಸ ಕೊಳವೆಬಾವಿ ಕೊರೆಸಲು ಅವಕಾಶವಿರುವುದಿಲ್ಲ. ಗ್ರಾಪಂ 15ನೇ ಹಣಕಾಸು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅನುದಾನದಲ್ಲಿ ಹೊಸ ಕೊಳವೆಬಾವಿ ಕೊರೆಸಬಹುದಾಗಿದೆ ಎಂದು ತಿಳಿಸಿದರು.
ಬರ ನಿರ್ವಹಣೆಗೆ ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ನೇಮಿಸಲಾಗಿದೆ ಹಾಗೂ ಆಯಾ ತಾಲೂಕಿನ ಹೋಬಳಿ ಮಟ್ಟದಲ್ಲಿ ನೇಮಿಸಿದ ಅಧಿಕಾರಿಗಳು ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಉಪಸ್ಥಿತರಿದ್ದರು.
8.52 ಲಕ್ಷ ಟನ್ ಮೇವು ಲಭ್ಯ
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ. ಮುಂದಿನ 53 ವಾರಗಳಿಗೆ ಸಾಕಾಗುವಷ್ಟು 8.52 ಲಕ್ಷ ಟನ್ ಮೇವಿನ ಲಭ್ಯತೆ ಇದೆ. ಜಿಲ್ಲೆಗೆ 10,259 ಮೇವಿನ ಬೀಜದ ಮಿನಿ ಕಿಟ್‌ಗಳನ್ನು ಪೂರೈಸಲಾಗಿದೆ. ನೀರಿನ ಸೌಲಭ್ಯ ಇರುವ ರೈತರಿಗೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಮೇವಿನ ಬೀಜದ ಕಿಟ್ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಫ್ರೂಟ್ಸ್ ಐಡಿಯಲ್ಲಿ ಮೂರನೇ ಸ್ಥಾನ
ಜಿಲ್ಲೆಯಲ್ಲಿ ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ರೈತರ ಮಾಹಿತಿಯನ್ನು ಫ್ರೂಟ್ ವೆಬ್‌ಸೈಟ್‌ನಲ್ಲಿ 4,05,955 ರೈತರ ಡಾಟಾ ಎಂಟ್ರಿ ಮಾಡುವ ಮೂಲಕ ಶೇ.83.40ರಷ್ಟು ಸಾಧನೆ ಮಾಡಲಾಗಿದೆ. ರಾಜ್ಯದಲ್ಲೇ ಹಾವೇರಿ 3ನೇ ಸ್ಥಾನದಲ್ಲಿದೆ. ಫ್ರೂಟ್ ಐಡಿಯಲ್ಲಿ ಆರ್‌ಟಿಸಿ ನೋಂದಣಿ ಬಾಕಿ ಇರುವ ರೈತರು ಕೂಡಲೇ ಆಯಾ ತಾಲೂಕಿನ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬೇಕು ಎಂದು ಡಿಸಿ ಮನವಿ ಮಾಡಿಕೊಂಡರು.
12 ಕೋಟಿ ರೂ. ಅನುದಾನ
ಪ್ರಸಕ್ತ 2023-24ನೇ ಸಾಲಿನ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಪ್ರಕೃತಿ ವಿಕೋಪದ ಪಿಡಿ ಖಾತೆಗೆ 12 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಯ ಎಲ್ಲ ತಾಲೂಕು ತಹಶೀಲ್ದಾರರ ಪ್ರಕೃತಿ ವಿಕೋಪ ನಿರ್ವಹಣೆ ಪಿಡಿ ಖಾತೆಗೆ ತಲಾ 50 ಲಕ್ಷ ರೂ.ನಂತೆ ನಾಲ್ಕು ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾಡಳಿತ ಬಳಿ ಎಂಟು ಕೋಟಿ ರೂ. ಅನುದಾನ ಲಭ್ಯವಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net