48 ಗಂಟೆ ಮುನ್ನ ಅನುಮತಿ ಕಡ್ಡಾಯ; ಚುನಾವಣಾ ರ್ಯಾಲಿ, ಸಭೆಗಳಿಗೆ ಬಿಗಿ ನಿಯಮ; ಶೈಕ್ಷಣಿಕ ಸಂಸ್ಥೆ, ಧಾರ್ಮಿಕ ಸ್ಥಳಗಳಲ್ಲಿ ಪ್ರಚಾರ ಮಾಡುವಂತಿಲ್ಲ

5 HVR 5
Published on

ಹಾವೇರಿ: ನಾಮಪತ್ರ ಸಲ್ಲಿಕೆ ಸಂದರ್ಭ ಒಳಗೊಂಡಂತೆ ಯಾವುದೇ ಪ್ರಚಾರ, ರ್ಯಾಲಿ, ಸಭೆ, ಸಮಾರಂಭ ನಡೆಸಲು ಪೂರ್ವಾನುಮತಿ ಕಡ್ಡಾಯವಾಗಿದೆ. 48 ಗಂಟೆಗಳ ಮುಂಚಿತವಾಗಿ ಸುವಿಧಾ ಪೋರ್ಟಲ್‌ನಲ್ಲಿ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು. ಅನುಮತಿ ಪಡೆದ ನಂತರವೇ ಚುನಾವಣಾ ಪ್ರಚಾರದ ಸಭೆ-ಸಮಾರಂಭ, ರ್ಯಾಲಿ ಇತ್ಯಾದಿ ಪ್ರಚಾರ ಕಾರ್ಯ ನಡೆಸಬೇಕು ಎಂದು ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಭೆ ನಡೆಸಿದ ಅವರು, ಚುನಾವಣಾ ಪ್ರಚಾರ ಕಾರ್ಯದಲ್ಲಿ 18 ವರ್ಷದೊಳಗಿನ ಮಕ್ಕಳ ಬಳಕೆ, ಪ್ರಾಣಿಗಳ ಬಳಕೆ, ಧಾರ್ಮಿಕ ಸ್ಥಳಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಚುನಾವಣಾ ಪ್ರಚಾರ ನಡೆಸುವುದು ನೀತಿಸಂಹಿತೆ ಉಲ್ಲಂಘನೆಯಡಿ ದೂರು ದಾಖಲಿಸಲಾಗುವುದು ಎಂದು ಹೇಳಿದರು.
ರೋಡ್ ಶೋಗಳಲ್ಲಿ ಭಾಗವಹಿಸುವ ಜನರ ಮತ್ತು ವಾಹನಗಳ ಲೆಕ್ಕವನ್ನು ಮೊದಲೇ ನೀಡಿ ಅನುಮತಿ ಪಡೆದುಕೊಂಡಿರಬೇಕು. ವಾಹನಗಳಿಗೆ ಅಗತ್ಯ ದಾಖಳೆಗಳು ಇರಬೇಕು. ಮೈಕ್ ಮತ್ತು ಎಲ್.ಇ.ಡಿ ವಿಡಿಯೋ ಪ್ರದರ್ಶನಕ್ಕೆ ಪೋಲಿಸ್ ಇಲಾಖೆಯಿಂದ ಪ್ರತ್ಯೇಕವಾಗಿ ಅನುಮತಿ ಪಡೆವುದು ಕಡ್ಡಾಯವಾಗಿದೆ. ಮಾದರಿ ನೀತಿಸಂಹಿತೆ ಉಲ್ಲಂಘನೆಯಾದಲ್ಲಿ ಈ ಪರವಾನಿಗೆ ಪತ್ರವು ತನ್ನಿಂದತಾನೆ ರದ್ದಾಗುತ್ತದೆ ಮತ್ತು ವಾಹನವನ್ನು ಜಪ್ತಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ಶಾಂತಿಯುತವಾಗಿ ಆಯೋಜಿಸಬೇಕು. ವ್ಯಕ್ತಿ ನಿಂದನೆ, ಕೋಮು ಭಾವನೆ ಕೆರಳಿಸುವ, ಜಾತಿ ಆಧಾರಿತ ಚರ್ಚೆಗೆ ಅವಕಾಶವಿಲ್ಲ. ಯಾವುದೇ ಸರ್ಕಾರಿ ಕಟ್ಟಡದಲ್ಲಿ ಅಥವಾ ಧಾರ್ಮಿಕ ಸ್ಥಳಗಳಲ್ಲಿ ಆಯೋಜನೆ ಮಾಡಬಾರದು. ಪ್ಲಾಸ್ಟಿಕ್ ವಸ್ತುಗಳ ಬಳಕೆ ತಪ್ಪಿಸಬೇಕು. ಸ್ಥಳೀಯ ಪೋಲಿಸ್ ಅಧಿಕಾರಿಗಳು ನೀಡುವ ಎಲ್ಲ ಸೂಚನೆಗಳನ್ನು ಪಾಲಿಸಬೇಕು. ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಹಾಗೂ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಚುನಾವಣಾ ಶಿರಸ್ತೇದಾರ ಎಂ.ಜಿ.ಚಿತ್ತೆಖಾನ್, ಮಾಸ್ಟರ್ ಟ್ರೈನರ್ ಅರವಿಂದ ಐರಣಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಆಮ್ ಆದ್ಮಿ ಪಕ್ಷ ಹಾಗೂ ಇತರ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಾಹನಗಳಿಗೆ ಅನುಮತಿ ಕಡ್ಡಾಯ
ಚುನಾವಣಾ ರ್ಯಾಲಿ, ಪ್ರಚಾರ ಕಾರ್ಯ, ಸಮಾರಂಭಗಳಲ್ಲಿ ಭಾಗವಹಿಸುವ ದ್ವಿಚಕ್ರ ವಾಹನ ಸೇರಿದಂತೆ ಪ್ರತಿಯೊಂದು ವಾಹನಗಳಿಗೂ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ಪಡೆಯದೇ ವಾಹನಳು ಬಳಕೆ ಮಾಡಿದರೆ ಮೋಟಾರು ವಾಹನ ಕಾಯ್ದೆ, ಕರ್ನಾಟಕ ಪೋಲಿಸ್ ಕಾಯ್ದೆ ಮತ್ತು ಸಂಚಾರಿ ನಿಯಮಗಳನ್ನು ಹಾಗೂ ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗುವುದು. ಇದರೊಂದಿಗೆ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು.
ರಾತ್ರಿ 10ರ ನಂತರ ಪ್ರಚಾರ ನಿಷಿದ್ಧ
ರೋಡ್ ಶೋಗಳಲ್ಲಿ ಬಳಸುವ ಧ್ವನಿವರ್ಧಕಗಳಿಗೆ ಅನುಮತಿ ಕಡ್ಡಾಯವಾಗಿದೆ. ಈ ಧ್ವನಿವರ್ಧಕದ ಡೆಸಿಬಲ್ ನಿಗದಿಪಡಿಸಿದ ಮಿತಿಯೊಳಗೆ ಇರಬೇಕು. ಧ್ವನಿ ವರ್ಧಕಗಳನ್ನು ರಾತ್ರಿ 10ರ ನಂತರ ಮತ್ತು ಬೆಳಗ್ಗೆ 6 ಗಂಟೆಯೊಳಗೆ ಬಳಸುವಂತಿಲ್ಲ. ಒಂದು ವೇಳೆ ಬಳಸಿದರೆ ಅದನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಲಾಗುವುದು. ರಾತ್ರಿ 10 ಗಂಟೆಯ ನಂತರ ಬಹಿರಂಗ ಪ್ರಚಾರ ಮಾಡುವಂತಿಲ್ಲ ಎಂದು ಡಿಸಿ ಹೇಳಿದರು.
ಜಾಲತಾಣಕ್ಕೂ ಅನುಮತಿ ಬೇಕು :
ಸಾಮಾಜಿಕ ಜಾಲತಾಣಗಳ ಮೂಲಕ ಮಾಡುವ ಪ್ರಚಾರಕ್ಕೂ ಕೂಡ ಅನುಮತಿ ಕಡ್ಡಾಯವಾಗಿದೆ. ಬಲ್ಕ್ ಸಂದೇಶಗಳೂ ಕೂಡ ಮಾದರಿ ನೀತಿಸಂಹಿತೆಯ ವ್ಯಾಪ್ತಿಯೊಳಗೆ ಬರುತ್ತವೆ. ಮತದಾನಕ್ಕೆ ನಿಗದಿಪಡಿಸಿದ ಅವಧಿಯ 48 ಗಂಟೆಗಳ ಮುಂಚಿನ ಅವಧಿಯನ್ನು ನಿಶ್ಯಬ್ಧ ಅವಧಿ ಎಂದು ಪರಿಗಣಿಸಲಾಗುವುದು. ಈ ಅವಧಿಯಲ್ಲಿ ಕೇವಲ ಮನೆ ಮನೆ ಪ್ರಚಾರಕ್ಕೆ ಮಾತ್ರ ಅನುಮತಿ ನೀಡಲಾಗುತ್ತದೆ ಎಂದು ಡಿಸಿ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net