

ಹಾವೇರಿ: ಚರಂಡಿ ಮೇಲೆ ಕಲ್ಲು ಮುಚ್ಚದೇ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಹಾವೇರಿ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಗುರುವಾರ ಆದೇಶಿಸಿದ್ದಾರೆ.
ಚರಂಡಿ ಅಗಲೀಕರಣಕ್ಕಾಗಿ ಶಿವಾಜಿನಗರ ಮೂರನೇ ಕ್ರಾಸ್‌ನ ಯೂನಿಯನ್ ಬ್ಯಾಂಕ್ ಎದುರಿನ ಆಲದ ಮರ ಕಡಿಯಲು ಪೌರಾಯುಕ್ತರು ಕೋರಿದ್ದರು. ಹಾವೇರಿ ವಲಯ ಅರಣ್ಯಾಧಿಕಾರಿಗಳು ಮರ ತೆರವುಗೊಳಿಸಿದ್ದರು. ನಂತರ ಚರಂಡಿ ಮೇಲಿದ್ದ ಕಲ್ಲುಗಳನ್ನು ಮುಚ್ಚದೇ ಹಾಗೆ ಬಿಟ್ಟ ಕಾರಣ ನಿವೇದನ ಗುಡಗೇರಿ ಆಕಸ್ಮಿಕವಾಗಿ ಚರಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ಬೇಜವಾಬ್ದಾರಿತನ ಹಾಗೂ ಕರ್ತವ್ಯಲೋಪ ಆರೋಪದಡಿ ಅಮಾನತುಗೊಳಿಸಿರುವುದಾಗಿ ಡಿಸಿ ತಿಳಿಸಿದ್ದಾರೆ.
ವೀರಮಲ್ಲಪ್ಪಗೆ ಪ್ರಭಾರ ಹುದ್ದೆ
ಹಾವೇರಿ ನಗರಸಭೆಯ ಪ್ರಭಾರ ಪೌರಾಯುಕ್ತರನ್ನಾಗಿ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪೂಜಾರ ವೀರಮಲ್ಲಪ್ಪ ಅವರನ್ನು ನೇಮಿಸಿ ಡಿಸಿ ಆದೇಶಿಸಿದ್ದಾರೆ.