

ಹಾವೇರಿ: ವಿಧಾನಸಭಾ ಚುನಾವಣೆ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಿ, ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ತಡೆಗೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ಸೂಚಿಸಿರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡ ಮಾದರಿ ನೀತಿ ಸಂಹಿತೆ, ಫ್ಲೈಯಿಂಗ್ ಸ್ಕ್ವಾಡ್ ತಂಡ ಹಾಗೂ ಸ್ಟ್ಯಾಟಿಕಲ್ ಸರ್ವಲನ್ಸ್ ತಂಡಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣಾ ಅಕ್ರಮಗಳ ತಡೆಗೆ ನಿಮಗೆ ಮುಕ್ತ ಅಧಿಕಾರ ನೀಡಲಾಗಿದೆ. ದಂಡಾಧಿಕಾರಿಗಳ ಅಧಿಕಾರ ಪ್ರತ್ಯಾಯೋಜಿಸಲಾಗಿದೆ. ನಿರ್ಭೀತಿಯಿಂದ ಕಾರ್ಯನಿರ್ವಹಿಸಿ ಎಂದು ತಾಕೀತು ಮಾಡಿದರು.
ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಯಾವುದೇ ದೂರುಗಳು ದಾಖಲಾಗಿಲ್ಲ. ತಾವು ವಿಜಿಲೆನ್ಸಿಯನ್ನು ತೀವ್ರಗೊಳಿಸಿ, ಪೊಲೀಸ್, ಕಂದಾಯ ಹಾಗೂ ಇತರ ಅಧಿಕಾರಿಗಳು ಪರಸ್ಪರ ಮಾಹಿತಿ ವಿನಿಮಯದೊಂದಿಗೆ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.
ಅಗತ್ಯವಿದ್ದಲ್ಲಿ ಹೆಚ್ಚುವರಿ ಚೆಕ್‌ಪೋಸ್ಟ್ ಸ್ಥಾಪನೆ, ಸಿಬ್ಬಂದಿ ನೇಮಕ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ತಮ್ಮ ಅಗತ್ಯತೆ ಹಾಗೂ ಬೇಡಿಕೆಗೆ ಅನುಸಾರ ಒದಗಿಸಲು ಸಿದ್ಧವಾಗಿದ್ದೇವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಮ್ಮದೇ ಗುಪ್ತಚರ ವಿವೇಕದಿಂದ ಕರ್ತವ್ಯ ನಿರ್ವಹಿಸಿ ಚುನಾವಣಾ ಅಕ್ರಮಗಳನ್ನು ಪತ್ತೆಮಾಡಿ ನಿಯಂತ್ರಿಸಿ ಎಂದರು.
ಹೋಟೆಲ್‌ಗಳಲ್ಲಿ ಬೇರೆ ಬೇರೆ ರಾಜ್ಯದ, ಜಿಲ್ಲೆಗಳಿಂದ ಆಗಮಿಸಿ ವಾಸ್ತವ್ಯ ಮಾಡುತ್ತಿರುವುದು ಕಂಡುಬಂದಿದೆ. ಕಳೆದ 10 ದಿನಗಳಲ್ಲಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ ಅತಿಥಿಗಳ ಮಾಹಿತಿ ಸಂಗ್ರಹಿಸಿ. ವಾಸ್ತವ್ಯ ಹೂಡಿರುವರರ ಗುರುತು ಪತ್ರ, ಆಗಮನ ಮತ್ತು ನಿರ್ಗಮನದ ಮಾಹಿತಿ ಪಡೆಯಿರಿ ಎಂದು ಸೂಚಿಸಿದರು.
ಮಾದರಿ ನೀತಿ ಸಂಹಿತೆ ಗ್ರಾಮೀಣ ಮತ್ತು ನಗರ ಪ್ರದೇಶದ ನೋಡಲ್ ಅಧಿಕಾರಿಗಳು ನಾಳೆಯೊಳಗಾಗಿ ಎಲ್ಲ ಪ್ರಿಂಟಗ್ ಪ್ರೆಸ್‌ಗಳನ್ನು ತಪಾಸಣೆ ನಡೆಸಿ ವರದಿ ನೀಡಬೇಕು. ಅನುಮತಿ ಇಲ್ಲದೆ ಕರಪತ್ರಗಳ ಮುದ್ರಣ, ಹಂಚಿಕೆ ಹಾಗೂ ಬ್ಯಾನರ್ ಸೇರಿದಂತೆ ಪ್ರಚಾರ ಸಾಮಗ್ರಿಗಳ ಮುದ್ರಣದ ಬಗ್ಗೆ ಗಮನಹರಿಸಲು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದವರು ಎಷ್ಟೇ ದೊಡ್ಡ ವ್ಯಕ್ತಿಗಳಿರಲಿ ಹಿಂಜರಿಕೆ ಬೇಡ. ದೊಡ್ಡವರೆಂದು ಮೃದು ಧೋರಣೆ ತೋರಿದರೆ ಅದರ ಪರಿಣಾಮ ನೀವು ಎದುರಿಸಬೇಕಾಗುತ್ತದೆ. ನಿಮ್ಮ ಬೆನ್ನಹಿಂದೆ ನಾವಿದ್ದೇವೆ. ಚುನಾವಣಾ ಆಯೋಗವಿದೆ. ಧೈರ್ಯದಿಂದ ಮುನ್ನುಗ್ಗಿ ಕಾರ್ಯನಿರ್ವಹಿಸಿ ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಸೇರಿದಂತೆ ಇತರ ಅಧಿಕಾರಿ, ಸಿಬ್ಬಂದಿ ಇದ್ದರು.