ಸಿರಿಧಾನ್ಯ ಪಾಕ ಸ್ಪರ್ಧೆ ಡಿ.4ರಂದು

Published on

ಹಾವೇರಿ: ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2025ರ ಅಂಗವಾಗಿ ಜಿಲ್ಲೆಯಲ್ಲಿ ‘ಮರೆತು ಹೋದ ಖಾದ್ಯಗಳ ಹಾಗೂ ಸಿರಿಧಾನ್ಯ ಪಾಕ ಸ್ಪರ್ಧೆಯನ್ನು ಡಿ.4ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿಯವರ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಜಿಲ್ಲೆಯಿಂದ ಆಯ್ಕೆಯಾದ ಸ್ಪರ್ಧಿಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಈ ಕೆಳಗಿನ ಸೂಚನೆಗಳನ್ನು ಪಾಲಿಸಬೇಕು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಧ್ಯಾರ್ಥಿಗಳು/ ಕೃಷಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಬಿಟ್ಟು ಜಿಲ್ಲೆಯ ಎಲ್ಲ ಸಾರ್ವಜನಿಕರು ಭಾಗವಹಿಸಲು ಅವಕಾಶವಿರುತ್ತದೆ.

ಪ್ರತಿಸ್ಪರ್ಧಿಗೆ ಒಂದೇ ತಿನಿಸು (ಅಡುಗೆ) ಸಿಹಿ, ಖಾರ(ಸಿರಿ ಧಾನ್ಯ) ಹಾಗೂ ಮರೆತು ಹೋದ ಖಾದ್ಯ ಮಾಡಲು ಅವಕಾಶವಿರುತ್ತದೆ. ಸಿರಿಧಾನ್ಯ ಸಸ್ಯಹಾರಿ ತಿನಿಸುಗಳಿಗೆ ಮಾತ್ರ ಅವಕಾಶವಿರುತ್ತದೆ. ಮನೆಯಲ್ಲಿಯೇ ತಯಾರಿಸಿದ ಸಿರಿಧಾನ್ಯ ತಿನಿಸು (ಸಿಹಿ/ಖಾರ) ಹಾಗೂ ಮರೆತು ಹೋದ ಖಾದ್ಯವನ್ನು ಪ್ರದರ್ಶಿಸಲು ಅವಕಾಶವಿರುತ್ತದೆ. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ.

ತಯಾರಿಸಿದ ತಿನಿಸುಗಳ ಪ್ರದರ್ಶನ, ತಯಾರಿಕೆಗೆ ಬಳಸಿದ ಪದಾರ್ಥಗಳು, ತೋರಿಕೆ, ರುಚಿ, ಸುವಾಸನೆಗಳ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಒಂದು ಸಿಹಿ, ಖಾರ(ಸಿರಿ ಧಾನ್ಯ)ಹಾಗೂ ಮರೆತು ಹೋದ ಖಾದ್ಯ ತಿನಿಸು ಆಯ್ಕೆ ಮಾಡುಲಾಗುವುದು. ಜಿಲ್ಲಾ ಮಟ್ಟಕ್ಕೆ ಸಿಹಿ, ಖಾರ(ಸಿರಿ ಧಾನ್ಯ) ಹಾಗೂ ಮರೆತುಹೋದ ಖಾದ್ಯಗಳಿಗೆ ಬಹುಮಾನ ವಿತರಿಸಲಾಗುವುದು.

ರಾಜ್ಯ ಮಟ್ಟದ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗುವುದು. ರಾಜ್ಯಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ವಿಜೇತರು ಸ್ವತಃ ತಿನಿಸನ್ನು ಅವಶ್ಯವಿರುವ ಸಾಮಗ್ರಿಗಳೊಂದಿಗೆ ತಯಾರಿಸಲು ಸಿದ್ಧರಿರಬೇಕಾಗುತ್ತದೆ. ರಾಜ್ಯಮಟ್ಟದ ಸಿರಿಧಾನ್ಯ ಪಾಕಸ್ಪರ್ಧೆಯ ಸ್ಥಳ, ಭಾಗವಹಿಸುವಿಕೆ ಕುರಿತು ವಿವರಗಳನ್ನು ಮುಂದಿನ ಸುತ್ತೋಲೆಯಲ್ಲಿ ತಿಳಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net