ಡಿಸಿ ಕಚೇರಿ ಎದುರು ನಿವೃತ್ತ ನೌಕರರ ಪ್ರತಿಭಟನೆ

3 HVR 5
Published on

ಹಾವೇರಿ: 2022ರ ಜುಲೈ 1ರಿಂದ 2024ರ ಜುಲೈ 31ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಮರಣ ಹಾಗೂ ನಿವೃತ್ತಿ ಉಪದಾನ (ಡಿಸಿಆರ್‌ಜಿ) ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನಿವೃತ್ತ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಕರ್ನಾಟಕ ನಿವೃತ್ತ ನೌಕರರ ವೇದಿಕೆ ನೇತೃತ್ವದಲ್ಲಿ ಸದಸ್ಯರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಿದರು. ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮೂಲಕ ಮುಖ್ಯಮಂತ್ರಿ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು.
ಮರಣ ಹಾಗೂ ನಿವೃತ್ತಿ ಉಪದಾನ (ಡಿಸಿಆರ್‌ಜಿ), ನಿವೃತ್ತಿ ನಂತರದ ಪರಿವರ್ತನೆ ನಿಧಿ (ಕಮ್ಯೂಟೇಶನ್), ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಬೇಡಿಕೆ ಈಡೇರಿಕೆಗಾಗಿ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ, ಸೆ.18ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 12 ಸಾವಿರಕ್ಕೂ ಹೆಚ್ಚು ನಿವೃತ್ತ ನೌಕರರ ಸಮ್ಮುಖದಲ್ಲಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೂ ಸ್ಪಂದನೆ ಸಿಕ್ಕಿಲ್ಲ ಎಂದು ಪ್ರತಿಭಟನಕಾರರು ದೂರಿದರು.
2022ರ ಜುಲೈ 1ರಿಂದ 2024ರ ಜುಲೈ 31ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಈ ಸಂಬಂಧ ಪರಿಷ್ಕೃತ ಆದೇಶವನ್ನು ತ್ವರಿತವಾಗಿ ಹೊರಡಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಿವೃತ್ತ ನೌಕರರ ವೇದಿಕೆಯ ಪದಾಧಿಕಾರಿಗಳಾ ಆರ್.ಡಿ.ಹೊಂಬರಡಿ, ಎಸ್.ಜೆ.ಕೋರಿ, ಎಂ.ಎಫ್.ಬಡಿಗೇರ, ಕೆ.ಸಿ.ಪಾಟೀಲ, ಎನ್.ಬಿ.ಕಾಳೆ, ನಾಗರಾಜ ಇಚ್ಚಂಗಿ, ಎಸ್.ಬಿ.ಸೂರಟೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net