

ಹಾವೇರಿ: ಕಡಿಮೆ ಅವಧಿಯಲ್ಲಿ ನಿಮ್ಮ ಹಣ ಡಬಲ್ ಮಾಡುತ್ತೇವೆ ಎಂದು ಹಣ ತುಂಬಿಸಿಕೊಂಡು ಸಾವಿರಾರು ಜನರಿಗೆ ಕೋಟ್ಯಂತರ ರೂ. ವಂಚಿಸಿರುವ ವಿವಿಧ ಕಂಪನಿಗಳಿಂದ ನ್ಯಾಯ ಕೊಡಿಸುವಂತೆ ಆಗ್ರಹಿಸಿ ವಂಚನೆ ಸಂತ್ರಸ್ತ ಠೇವಣಿದಾರರು ಕುಟುಂಬದವರ ಸಂಸ್ಥೆ (ತಗಿ ಪೀಡಿತ ಜಮಾಕರ್ತ ಪರಿವಾರ) ವತಿಯಿಂದ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಅಸಹಕಾರ ಚಳವಳಿ ಆರಂಭಿಸಲಾಗಿದೆ.
ಡಿಸಿ ಕಚೇರಿ ಮುಖ್ಯದ್ವಾರದ ಬಳಿ ಸೆ.1ರಂದು ಧರಣಿ ಆರಂಭಿಸಿದ್ದು, 12ನೇ ದಿನಕ್ಕೆ ಕಾಲಿಟ್ಟಿದೆ. 300ಕ್ಕೂ ಹೆಚ್ಚು ಕಂಪನಿಗಳು ಜಿಲ್ಲೆ ಸೇರಿದಂತೆ ದೇಶಾದ್ಯಂತ ಒಂದು ಸಲ ಹಣ ಠೇವಣಿ ಇಟ್ಟರೆ ಐದು, ಆರು ವರ್ಷಗಳಲ್ಲಿ ದುಪ್ಪಟ್ಟು ಮಾಡಿಕೊಡುತ್ತೇವೆ. ಷೇರು ಹಣ ಪಾವತಿಸಿದರೆ, ಹತ್ತಾರು ಪಟ್ಟು ಲಾಭ ದೊರೆಯುತ್ತದೆ ಎಂದೆಲ್ಲ ನಂಬಿಸಿ ಕೋಟ್ಯಂತರ ರೂ. ಪಾವತಿಸಿಕೊಂಡು ಕಚೇರಿಗಳನ್ನು ಬಂದ್ ಮಾಡಿಕೊಂಡು ಪರಾರಿಯಾಗಿವೆ.
ಹಣದ ಆಸೆ ತೋರಿಸಿ ಮುಗ್ದ ಜನರಿಗೆ ಹಾವೇರಿ ಜಿಲ್ಲೆಯೊಂದರಲ್ಲೇ ಒಂದು ಕಂಪನಿ 40 ಕೋಟಿ ರೂ. ವಂಚಿಸಿದೆ. ಇಂತಹ ಅನೇಕ ಸಂಸ್ಥೆಗಳು ವಂಚನೆ ಮಾಡಿವೆ. ವಂಚನೆಗೀಡಾದವರಿಗೆ ಬರ್ಡ್ಸ್ ಕಾಯ್ದೆಯಡಿ ಅರ್ಜಿ ಸ್ವೀಕರಿಸಿ, 180 ದಿನದೊಳಗೆ ಎಲ್ಲ ಅರ್ಜಿದಾರರಿಗೆ ಹಣ ಕೊಡಿಸಬೇಕೆಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಯವರಿಗೆ ಒತ್ತಯಿಸಿದರು.
ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಸೈಯದ್ ಸಾಬ ಹುಲಗೂರ, ಎಐಟಿಯುಸಿ ಅಧ್ಯಕ್ಷ ಹೊನ್ನಪ್ಪ ಮರಿಯಮ್ಮನವರ, ಚಂದ್ರಶೇಖರ ಮರಿಗೌಡ್ರ, ಮಹಮ್ಮದ್ ಇಸಾಕ್ ಹುದ್ದಾರ, ಸುರೇಶ ಹೊನ್ನಾಳಿ, ರವೀಶ ಎಂ., ರುಕ್ಮಿಣಿ ಹುಲಿಕಟ್ಟಿ, ಇತರರಿದ್ದರು.