

ಹಾವೇರಿ: ನಗರದ ಗಾಂಧಿ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಭಗೀರಥ ಉಪ್ಪಾರ ಸಮಾಜದ ವತಿಯಿಂದ ಮಹರ್ಷಿ ಭಗೀರಥ ಜಯಂತಿ ಆಚರಿಸಲಾಯಿತು.
ಜಿಲ್ಲಾ ಉಸ್ತವಾರಿ ಸಚಿವ ಶಿವಾನಂದ ಪಾಟೀಲ ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಉಪನ್ಯಾಸಕರಾಗಿ ಭಾಗವಹಿಸಿದ್ದ ಸತೀಶ ಎಂ.ಬಿ. ಮಾತನಾಡಿ, ಭಗೀರಥ ಮಹರ್ಷಿ ಘೋರ ತಪಸ್ಸಿನ ಮೂಲಕ ಪವಿತ್ರ ಗಂಗೆಯನ್ನು ಭೂಮಿಗೆ ತಂದ ಚೈತನ್ಯದ ಚಿಲುಮೆ ಹಾಗೂ ಛಲಗಾರ. ಭಗೀರಥರು ಅಸಾಧ್ಯವನ್ನು ಕಠಿಣ ಪ್ರಯತ್ನದ ಮೂಲಕ ಸಾಧ್ಯ ಮಾಡುವುದನ್ನು ತೋರಿಸಿದ್ದಾಗಿದೆ. ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ತಂದು ತನ್ನ ಹಿರಿಯರಿಗೆ ಜಲದರ್ಪಣ ಮಾಡಿದ ಭಗೀರಥನ ಸಾಧನೆ ಅಸಮಾನ್ಯ. ಇದು ಪರಿಶ್ರಮ ಮತ್ತು ಕಠಿಣ ನಿರ್ಣಯಗಳ ಮೂಲಕ ಜಯ ಸಾಧಿಸಬಹುದು ಎಂಬುದಕ್ಕೆ ಮುನ್ನುಡಿಯಾಗಿದೆ. ಭಗೀರಥ ಮಹಿರ್ಷಿಗಳ ಅರಿತು, ಅವರ ಮಾರ್ಗದಲ್ಲಿ ನಡೆಯುವ ಅವಶ್ಯಕತೆ ಇದೆ ಎಂದರು.
ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ನಗರಸಭಾ ಸದಸ್ಯ ಸಂಜೀವ ನೀರಲಗಿ, ಅಪರ ಜಿಲ್ಲಾಧಿಕಾರಿ ಎಲ್.ನಾಗರಾಜ., ತಹಸೀಲ್ದಾರ ಶರಣಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ ಚಿನ್ನಿಕಟ್ಟಿ, ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಉಪ್ಪಾರ, ಇತರರು ಉಪಸ್ಥಿತರಿದ್ದರು.