ಗ್ಯಾರಂಟಿ ಕ್ಯಾಲೆಂಡರ್ ಬಿಡುಗಡೆಗೆ ಜೆಡಿಎಸ್ ಆಗ್ರಹ; ಪ್ರತಿ ತಿಂಗಳು ಗೃಹಲಕ್ಷ್ಮೀ ಹಣ ಜಮೆ ಮಾಡುವಂತೆ ಮಂಜುನಾಥ ಗೌಡಶಿವಣ್ಣನವರ ಒತ್ತಾಯ

6 HVR 6
Published on

ಹಾವೇರಿ: ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇದೀಗ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ಗೃಹಲಕ್ಷ್ಮೀ, ಯುವನಿಧಿ ಹಣವನ್ನು ಮೂರು, ನಾಲ್ಕು ತಿಂಗಳಿಗೊಮ್ಮೆ ಜಮೆ ಮಾಡುತ್ತಿದೆ. ಈ ಕೂಡಲೇ ಗ್ಯಾರಂಟಿ ಕ್ಯಾಲೆಂಡರ್ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಜೆಡಿಎಸ್ ಒತ್ತಾಯಿಸಿದೆ.

ಇಲ್ಲಿನ ದೇವಗಿರಿ ಜಿಲ್ಲಾಡಳಿತ ಭವನದ ಬಳಿ ಗುರುವಾರ ಪ್ರತಿಭಟನೆ ನಡೆಸಿದ ಜೆಡಿಎಸ್ ಜಿಲ್ಲಾ ಘಟಕದ ಪದಾಧಿಕಾರಿಗಳು, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಪ್ರತಿ ತಿಂಗಳು ನೇರವಾಗಿ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗಳಿಗೆ ಜಮೆ ಮಾಡುವುದಾಗಿ ಬಣ್ಣದ ಮಾತು ಹೇಳಿದ್ದ ಕಾಂಗ್ರೆಸ್‌ನವರು, ಅಧಿಕಾರ ಸಿಗುತ್ತಿದ್ದಂತೆ ಎಲ್ಲ ಮರೆತಿದ್ದಾರೆ. ಡಿಬಿಟಿ ತಾಂತ್ರಿಕ ಸಮಸ್ಯೆ ಎಂದು ಕುಂಟು ನೆಪ ಹೇಳುತ್ತಿದ್ದಾರೆ. ಆದರೆ, ಚುನಾವಣೆಗಳು ಸಮೀಪ ಇದ್ದಾಗ ದಿಢೀರನೇ ಜನರ ಖಾತೆಗಳಿಗೆ ಹಣ ಹಾಕಿ ಮರಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರದ ವಯಫಲ್ಯ ಮತ್ತು ಮೈಕ್ರೋ ಫೈನಾನ್ಸ್‌ಗಳ ಹಾವಳಿಯಿಂದ ಅಮಾಯಕ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದೆಲ್ಲದಕ್ಕೂ ಸಿಎಂ ಸಿದ್ದರಾಮಯ್ಯ ಉತ್ತರ ಕೊಡಬೇಕು. ಈ ಕೂಡಲೇ ಗ್ಯಾರಂಟಿ ಕ್ಯಾಲೆಂಡರ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸಿದ್ದಬಸಪ್ಪ ಯಾದವ, ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಸಿದ್ದಪ್ಪ ಗುಡಿಮುಂದ್ಲವರ, ಜಿಲ್ಲಾ ಉಪಾಧ್ಯಕ್ಷ ಮೂಕಪ್ಪ ಪಡೆಯಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌನೇಶ ಕಮ್ಮಾರ, ಹಾವೇರಿ ತಾಲೂಕು ಅಧ್ಯಕ್ಷ ರವೀಂದ್ರ ಹಾನಗಲ್, ರಾಮಾನಗೌಡ ಪಾಟೀಲ, ಈರಣ್ಣ ನವಲಗುಂದ, ಎಸ್.ಕಾಡದೇವರಮಠ, ಸಂಜೀವ ಮಣ್ಣನವರ, ಸಂಜೀವ ಇಂದೂರ, ನಾಗರಾಜ ಅಜ್ಜನವರ, ರಮೇಶ ಮಾಕನೂರ, ಮಾಲತೇಶ ಬಡಿಗೇರ, ಇಬ್ರಾಹಿಂ ಯಲಗಚ್ಚ, ದಾವೂದ್ ಮಲ್ಲಿಕ್, ಐಶ್ವರ್ಯ ಮಡಿವಾಳರ, ಕಸ್ತೂರಿ ಅರ್ಕಸಾಲಿ, ರೀಟಾ ನಾಯ್ಕರ್, ಲತಾ ಇಂದೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net