ನಾಲ್ಕನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ; ಮಾಜಿ ಸಂಸದ ಮಂಜುನಾಥ ಕುನ್ನೂರ ಬೆಂಬಲ

9 HVR 5 A
Published on

ಹಾವೇರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ರೈತರು ಆರಂಭಿಸಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಪ್ರತಿಭಟನೆಯಲ್ಲಿ ಹಾನಗಲ್ಲ ತಾಲೂಕಿನ ರೈತರು ಪಾಲ್ಗೊಂಡಿದ್ದರು.

ಪ್ರತಿಭಟನಾ ಸ್ಥಳಕ್ಕೆ ಸೋಮವಾರ ಮಾಜಿ ಸಂಸದ ಮಂಜುನಾಥ ಕುನ್ನೂರ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಜಿಲ್ಲೆಯ ಬಹು ದಿನದ ಬೇಡಿಕೆಯಾದ ಬೇಡ್ತಿ ಮತ್ತು ವರದಾ ನದಿ ಜೋಡಣೆ ಬಗ್ಗೆ ರೈತರೊಂದಿಗೆ ಸವಿಸ್ತಾರವಾಗಿ ಮಾಹಿತಿ ಹಂಚಿಕೊಂಡರು. ಯೋಜನೆ ಜಾರಿಯಾಗಲೇಬೇಕು ಎಂದು ಒತ್ತಾಯಿಸಿದರು.

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನ, ಬೆಳೆವಿಮೆ, ಬೆಳೆ ನಷ್ಟ ಪರಿಹಾರ ಹಾಗೂ ನಬಾರ್ಡ್ ಸಾಲ ಮುಂದುವರಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರೈತರು ಆಗ್ರಹಿಸಿದರು. ಜಿಲ್ಲೆಯ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ತಾರತಮ್ಯ ಆಗಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಬೆಳೆವಿಮೆ ಹಣ ಹಾಕದೇ ಬೆಳೆವಿಮೆ ಕಂಪನಿಯವರು ರೈತರಿಗೆ ಅನ್ಯಾಯ ಮಾಡಿದ್ದು, ಕೂಡಲೇ ಜಿಲ್ಲಾಡಳಿತ ಬೆಳೆ ವಿಮೆ ತುಂಬಿಸಿಕೊಂಡ ಕಂಪನಿಯವರನ್ನು ಕರೆಸಿ ಲೆಕ್ಕಾಚಾರ ಮಾಡಿಸಿ, ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ನಮ್ಮ ಪ್ರಮುಖ ಬೇಡಿಕೆಯಾಗಿದ್ದು ಇದರಿಂದ ಹಾವೇರಿ ಜಿಲ್ಲೆಯಲ್ಲಿ ವರ್ಷವಿಡೀ ನೀರಾವರಿ ಮಾಡಬಹುದಾಗಿದೆ. ವ್ಯರ್ಥವಾಗಿ ಹರಿಯುವ ನೀರನ್ನು ಇಲ್ಲಿಗೆ ತಂದರೆ ಈ ಭಾಗದಲ್ಲಿ ರೈತರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಎಚ್.ಎಚ್.ಮುಲ್ಲಾ, ಸುರೇಶ ಚಲವಾದಿ, ಮಾಲತೇಶ ಪೂಜಾರ, ಅಡಿವೆಪ್ಪ ಆಲದಕಟ್ಟಿ, ಮಾಲತೇಶ ಪರಪ್ಪನವರ, ಶಂಕ್ರಣ್ಣ ಶಿರಗುಂಬಿ, ಮರಿಗೌಡ ಪಾಟೀಲ, ಶಿವಯೋಗಿ ಹೊಸಗೌಡ್ರ, ಮಲ್ಲನಗೌಡ ಮಾಳಗಿ, ಸೋಮಣ್ಣ ಜಡೆಗೊಂಡಣ್ಣನವರ, ಶ್ರೀಕಾಂತ ದುಂಡಣ್ಣನವರ, ರುದ್ರಪ್ಪ ಅಣ್ಣಿ. ಉಮೇಶ ಮೋಡಿ, ಪರಸಪ್ಪ ಮಡಿವಾಳರ, ಮಾಲತೇಶ ಕರೆಣ್ಣನವರ, ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net