ಗೊಬ್ಬರ ಸಮಸ್ಯೆ ಬಗೆಹರಿಸಲು ಬಿಜೆಪಿ ಆಗ್ರಹ; ಬಿಜೆಪಿಯಿಂದ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ; ಕೈ ಸರ್ಕಾರದ ವಿರುದ್ಧ ಹರಿಹಾಯ್ದ ಕೇಸರಿ ನಾಯಕರು

29 HVR 4 A
Published on

ಹಾವೇರಿ: ಜಿಲ್ಲೆಯಲ್ಲಿ ರೈತರಿಗೆ ಅಗತ್ಯವಾಗಿರುವ ಯೂರಿಯಾ ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಾಗೂ ನಿರಂತರವಾದ ಮಳೆಯಿಂದ ಹಾನಿಯಾಗಿರುವ ಬೆಳೆಗಳಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನೂರಾರು ಕಾರ್ಯಕರ್ತರು ಇಲ್ಲಿನ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.

ಡಿಸಿ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅನ್ನದಾತರ ಬೇಡಿಕೆಗೆ ಅನುಗುಣವಾಗಿ ಗೊಬ್ಬರ ಪೂರೈಸದ ರಾಜ್ಯ ಸರ್ಕಾರ ರೈತ ವಿರೋಧಿಯಾಗಿದೆ ಎಂದು ದೂರಿದರು. ಸಾಕಷ್ಟು ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಸರಬರಾಜು ಮಾಡಿದರೂ ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.

ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯುತ್ತಿದೆ. ನಿರಂತರವಾಗಿ ಜಿಟಿಜಿಟಿ ಮಳೆಯಾಗುತ್ತಿದೆ. ಮೊದಲ ಬಾರಿ ಬಿತ್ತಿದ ಬೀಜಗಳು ಮಳೆಗೆ ಕೊಳೆಯುತ್ತಿವೆ. ಹಲವು ರೈತರು ಎರಡು ಸಲ ಬಿತ್ತನೆ ಮಾಡಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ರೈತರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಈವರೆಗೂ ಬೆಳೆಹಾನಿ ಸಮೀಕ್ಷೆ ಮಾಡಿಸಿಲ್ಲ, ಮಧ್ಯಂತರ ಪರಿಹಾರ ನೀಡದೇ ಮೌನಾಗಿದೆ. ರೈತರಿಗೆ ಪಂಗನಾಮ ಹಾಕುವ ಸ್ಥಿತಿಯಲ್ಲಿ ಇದೆ. ಕೇಂದ್ರ 8.73 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ರಾಜ್ಯಕ್ಕೆ ನೀಡಿದ್ದು, ಈ ಸರ್ಕಾರ 6.37ಲಕ್ಷ ಮೆಟ್ರಿಕ್ ಟನ್ ಪೂರೈಸಿದೆ. ಇನ್ನೂ 2.43ಲಕ್ಷ ಮೆಟ್ರಿಕ್ ಟನ್ ಗೊಬ್ಬರ ನೀಡದೇ ಕಾಳಸಂತೆಯಲ್ಲಿ ಮಾರಾಟ ಮಾಡಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ನಾಯಕರು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕೃಷಿ ಸಚಿವರು ಮಂಡ್ಯ, ಮೈಸೂರು ಜಿಲ್ಲೆಗಳಿಗೆ ಮಾತ್ರ ಸಿಮೀತರಾಗಿದ್ದಾರೆ. ರಾಜ್ಯ ಪ್ರವಾಸವನ್ನು ಕೈಗೊಳ್ಳದಿರುವುದು ಈ ನಾಡಿನ ರೈತರ ದುರ್ದೈವ. ಸಚಿವ ಚಲುವರಾಯಸ್ವಾಮಿ ಮೊದಲು ಯಾವ ಜಿಲ್ಲೆಯಲ್ಲಿ ಯಾವ ಬೆಳೆಗಳನ್ನು ಬೆಳೆಯುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು. ಉಡಾಫೆ ಉತ್ತರ ಕೊಡುವುದನ್ನು ಕೈಬಿಡಬೇಕು. ಬೇರೆ ಜಿಲ್ಲೆಯಲ್ಲಿರುವ ಗೊಬ್ಬರವನ್ನು ಸಮಸ್ಯೆ ಇರುವ ಜಿಲ್ಲೆಗೆ ಪೂರೈಸಬೇಕು. ಆಮೇಲೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಹಾನಗಲ್ಲ, ಬ್ಯಾಡಗಿ, ಹಿರೇಕೆರೂರ, ಶಿಗ್ಗಾಂವಿಯಲ್ಲಿ ಬೆಳೆನಾಶ ಆಗಿದೆ. ಇನ್ನಾದರೂ ಯೂರಿಯಾ ಗೊಬ್ಬರವನ್ನು ಪೂರೈಸಬೇಕು, ಇಲ್ಲವಾದರೆ ಹೆದ್ದಾರಿ ತಡೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುತ್ತಿಗೆ ಯತ್ನ :

ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ವೇಳೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ತಡೆದರು. ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಆಗಮಿಸಿ ಮನವಿಪತ್ರ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ, ಮಂಜುನಾಥ ಓಲೇಕಾರ, ಕಲ್ಯಾಣಕುಮಾರ ಶೆಟ್ಟರ್, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಪಾಲಾಕ್ಷಗೌಡ ಪಾಟೀಲ, ಬಸವರಾಜ ಕಳಸೂರ, ಗಿರೀಶ ತುಪ್ಪದ, ಕಿರಣಕುಮಾರ ಕೋಣನವರ, ರುದ್ರೇಶ ಚಿನ್ನಣ್ಣನವರ, ನಿರಂಜನ ಹೇರೂರ, ವೆಂಕಟೇಶ ನಾರಾಯಣಿ, ವಿಜಯಕುಮಾರ ಚಿನ್ನಿಕಟ್ಟಿ, ಭೋಜರಾಜ ಕರೂದಿ, ಸಂತೋಷಕುಮಾರ ಪಾಟೀಲ, ಬಸವರಾಜ ಕುಲಕರ್ಣಿ, ಸುರೇಶ ಹೊಸಮನಿ, ಶಿವಾನಂದ ಮ್ಯಾಗೇರಿ, ಪರಮೇಶ್ವರಪ್ಪ ಮೇಗಳಮನಿ, ಸುಭಾಸ ಸಿರಿಗೇರಿ, ಶಿವಲಿಂಗಪ್ಪ ತಲ್ಲೂರು, ಭಾರತಿ ಜಂಬಗಿ, ಲಲಿತಾ ಗುಂಡೇನಹಳ್ಳಿ, ಮಂಜುನಾಥ ಗಾಣಿಗೇರ, ಮಹೇಶ ಕಮಡಳ್ಳಿ, ಗಂಗಾಧರ ಬಾಣದ, ನಾಗೇಂದ್ರ ಕಡಕೊಳ, ಜಗದೀಶ ಬಸೇಗಣ್ಣಿ, ಇತರರಿದ್ದರು.

ಕಾಳಸಂತೆಯಲ್ಲಿ ಮಾರಾಟ, ಗ್ಯಾರಂಟಿಗೆ ಬಳಕೆ

ರಾಜ್ಯಾದ್ಯಂತ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಲು ರಾಜ್ಯ ಸರ್ಕಾರವೇ ನೇರ ಹೊಣೆ. ಯೂರಿಯಾ ಕೊರತೆಯ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದೇ ಇರುವುದರಿಂದ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಯೂರಿಯಾ ಗೊಬ್ಬರದ ಒಂದು ಚೀಲದ ಬೆಲೆ 1,666 ರೂ. ಇದ್ದು, ಕೇಂದ್ರ ಸರ್ಕಾರ ಅದಕ್ಕೆ 1,400 ರೂ. ಸಬ್ಸಿಡಿ ನೀಡಿ ಕೇವಲ 266 ರೂ.ಗೆ ನೀಡುತ್ತಿದೆ. ಈ ಸಬ್ಸಿಡಿ ಹಣ ಕಬಳಿಸಿ, ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳುವ ದುರುದ್ದೇಶದಿಂದ ರಾಜ್ಯ ಸರ್ಕಾರದ ಅಧಿಕಾರಿಗಳು, ಮಾರಾಟಗಾರರು, ಫ್ಯಾಕ್ಟರಿಗಳೊಂದಿಗೆ ಶಾಮೀಲಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಆರೋಪಿಸಿದರು.

ವಸೂಲಿಕೋರರನ್ನು ಹಿಡಿದು ಖಾಕಿಗೆ ಒಪ್ಪಿಸಿ

ರಾಜ್ಯದ ಪ್ರತಿಯೊಬ್ಬ ರೈತರಿಗೂ ಅಗತ್ಯಕ್ಕೆ ತಕ್ಕಷ್ಟು ಯೂರಿಯಾ ಸಿಗುವವರೆಗೂ ಬಿಜೆಪಿ ಹೋರಾಟ ಮಾಡುತ್ತದೆ. ಸೊಸೈಟಿಗಳಲ್ಲಿ ಸರದಿ ಸಾಲಿನಲ್ಲಿ ನಿಲ್ಲುವ ರೈತರಿಗೆ ಬಿಜೆಪಿ ಕಾರ್ಯಕರ್ತರು ಬೆಂಬಲ ನೀಡಿ, ಗೊಬ್ಬರ ಸಿಗುವಂತೆ ನೋಡಿಕೊಳ್ಳಬೇಕು. ಯೂರಿಯಾ ಡಬಲ್ ಹಣ ವಸೂಲಿ ಮಾಡುವ ಹಾಗೂ ಗೊಬ್ಬರ ಕೊಡಲಿಕ್ಕೆ ತೊಂದರೆ ಮಾಡಿದ್ದರೆ, ಅಂತಹ ಮಾರಾಟಗಾರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net