ತಿಂಗಳಿಗೆ 15 ಸಾವಿರ ರೂ. ವೇತನ ನಿಗದಿಪಡಿಸಿ; ಆಶಾ ಕಾರ್ಯಕರ್ತರ ಆಗ್ರಹ; ಡಿಸಿ ಕಚೇರಿ ಎದುರು ಪ್ರತಿಭಟನೆ

2 HVR 2
Published on

ಹಾವೇರಿ: ಮಾಸಿಕ 15,000 ರೂ. ಗೌರವ ಧನ ಅಥವಾ ವೇತನ ನಿಗದಿಪಡಿಸುವುದು, ಆರ್‌ಸಿಎಚ್ ಪೋರ್ಟಲ್ ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಎಐಟಿಯುಸಿ ನೇತೃತ್ವದಲ್ಲಿ ಶುಕ್ರವಾರ ಇಲ್ಲಿನ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದೇವಗಿರಿ ಯಲ್ಲಾಪುರದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಮಾತನಾಡಿ, ಹಗಲಿರುಳು ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಚಟುವಟಿಕೆಗಳನ್ನು ಆರ್‌ಸಿಎಚ್ ಪೋರ್ಟಲ್‌ಗೆ ಲಿಂಕ್ ಮಾಡಿರುವುದರಿಂದ ಕೇಂದ್ರದ ಪ್ರೋತ್ಸಾಹ ಧನ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ಐದಾರು ವರ್ಷಗಳಿಂದ ಸಾವಿರಾರು ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೇ ಮೊಬೈಲ್ ಆಧಾರಿತ ಕೆಲಸಗಳ ಒತ್ತಡ, ಎನ್‌ಸಿಡಿ, ಎಸಿಎಫ್, ಟಿಬಿ ಸಂಬಂಧಿತ ಕೆಲಸಕ್ಕೆ ವರ್ಷಗಟ್ಟಲೇ ಪ್ರೋತ್ಸಾಹಧನ ನೀಡದಿರುವುದು ಸರಿದಂತೆ ಅನೇಕ ಸಮಸ್ಯೆಗಳಿಂದ ಜಿಲ್ಲೆಯ ಆಶಾಗಳು ತತ್ತರಿಸಿದ್ದಾರೆ ಎಂದರು.
ಆಶಾ ಕಾರ್ಯಕರ್ತೆಯರಿಗೆ ನಿಗದಿಪಡಿಸಿದ ಕೆಲಸಗಳನ್ನು ಹೊರತುಪಡಿಸಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತಾಯದಿಂದ ಬಳಸಿಕೊಳ್ಳಲಾಗುತ್ತಿದೆ. ಈ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದಲೂ ಆಶಾಗಳ ವೇತನದಲ್ಲಿ ಪುಡಿಗಾಸೂ ಏರಿಸಿಲ್ಲ. ಇನ್ನು ರಾಜ್ಯ ಸರ್ಕಾರ ಗ್ಯಾರಂಟಿಗಳನ್ನೇ ಗುರಾಣಿಯನ್ನಾಗಿಸಿಕೊಂಡಿದೆ. ಆದ್ದರಿಂದ ಈಗಾಗಲೇ ಕೊಡುತ್ತಿರುವ ಕೇಂದ್ರ-ರಾಜ್ಯ ಸರ್ಕಾರಗಳ ಗೌರವಧನ ಮತ್ತು ಪ್ರೋತ್ಸಾಹಧನ ಎರಡೂ ಸೇರಿಸಿ 15,000 ರೂ. ಮಾಸಿಕ ಗೌರವಧನ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಜಿಲ್ಲೆಯಲ್ಲಿ ಜಿಪಂ ಸಿಇಒ ಅವರ ಅಧ್ಯಕ್ಷತೆಯಲ್ಲಿ ಆಶಾಗಳ ಕುಂದುಕೊರತೆ ನಿವಾರಣಾ ಸಭೆ ಮಾಡಬೇಕೆಂದು ಇಲಾಖಾ ಆದೇಶವಿದ್ದರೂ ಇಲ್ಲಿಯವರೆಗೂ ಸಮರ್ಪಕವಾಗಿ ಸಭೆ ನಡೆಸಿಲ್ಲ. ಈ ಕೂಡಲೇ ಜಿಪಂ ಸಿಇಒ ಅವರು ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದರು.
ಜಿಲ್ಲಾಧ್ಯಕ್ಷೆ ಜಯಶೀಲಾ ಎಸ್.ಬಿ., ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ ಮಾಸೂರ, ಜಿಲ್ಲಾ ಕಾರ್ಯದರ್ಶಿ ರತ್ನಾ ಗಿರಣಿ, ಗೀತಾ ಮಡಿವಾಳರ, ರೇಖಾ ಕರಿಗಾರ, ಸೇರಿದಂತೆ ಜಿಲ್ಲೆಯ ನೂರಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net