ಹಾವೇರಿ: ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ದಂಡದ ಸೂಚನಾ ಫಲಕ ಅಳವಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ತಿಂದು ಉಗುಳಿದರೆ ಅಂಥವರಿಗೆ ದಂಡವಿಧಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ತಂಬಾಕು ನಿಯಂತ್ರಣ ಕುರಿತು ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ತಂಬಾಕು ನಿಯಂತ್ರಣ ತಿದ್ದುಪಡಿ ಕಾಯ್ದೆ-2024 ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ನಿಷೇಧಿಸಲಾಗಿದೆ. 21 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ದಂಡದ ಮೊತ್ತವನ್ನು 200 ರೂ. ಬದಲಾಗಿ 1,000 ರೂ.ಗೆ ಹೆಚ್ಚಿಸಲಾಗಿದೆ. ಈ ಕಾಯ್ದೆಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ, ಶಾಲಾ-ಕಾಲೇಜ್ ಮಕ್ಕಳಿಗೆ ಸತತವಾಗಿ ಅರಿವು ಮೂಡಿಸಬೇಕು. ತಾಲೂಕು ಮಟ್ಟದಲ್ಲಿ ನಿಯಮಾನುಸಾರ ಸಭೆ ನಡೆಸಬೇಕು ಹಾಗೂ ಅಂಗಡಿಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ತಂಬಾಕು ಮಾರಾಟಗಾರರಿಗೆ ನಿಯಮನುಸಾರ ಪ್ರತ್ಯೇಕ ಪರವಾನಗಿ ನೀಡಬೇಕು ಎಂದು ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಜಿಲ್ಲೆಯ ಬಸ್ ನಿಲ್ದಾಣಗಳ ಮಳಿಗೆಗಳಲ್ಲಿ ಕಡ್ಡಾಯವಾಗಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಿದರು.
ನಿಯಮಾನುಸಾರ ಶಾಲಾ-ಕಾಲೇಜ್‌ಗಳ 100 ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವಂತಿಲ್ಲ. ಆಯಾ ಶಾಲಾ-ಕಾಲೇಜ್‌ಗಳ ವ್ಯಾಪ್ತಿಯ ಸ್ಥಳೀಯ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ. ಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ ಮಾಡಬೇಕು. ಕೋಟ್ಪಾ-2003ರ ಕಾಯ್ದೆ ಪರಿಣಾಮಕಾರಿ ಅನುಷ್ಠಾನದ ಮೂಲಕ ತಂಬಾಕು ಮುಕ್ತ ಗ್ರಾಮಗಳ ಘೋಷಣೆ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ರಾಜ್ಯ ತಂಬಾಕು ಘಟಕದ ವಿಭಾಗೀಯ ಸಂಯೋಜಕ ಮಹಾಂತೇಶ ಉಳ್ಳಾಗಡ್ಡಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 73 ಕಡೆ ದಾಳಿ ನಡೆಸಿ, 695 ಪ್ರಕರಣ ದಾಖಲಿಸಲಾಗಿದೆ. 60,530 ರೂ. ದಂಡ ವಸೂಲಿ ಮಾಡಲಾಗಿದೆ. 10,755 ಪುರುಷ ಹಾಗೂ 7,221 ಮಹಿಳೆಯರು 17,976 ಜನರಿಗೆ ಆಪ್ತ ಸಮಾಲೋಚನೆ ನಡೆಸಲಾಗಿದೆ. ನಿಕೋಟಿನ್ ಗಮ್ಸ್ ಹಾಗೂ ಅಗತ್ಯ ಚಿಕಿತ್ಸೆ ನೀಡಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್ ಹಾವನೂರ, ಆರ್.ಸಿ.ಎಚ್ ಅಧಿಕಾರಿ ಡಾ.ಜಯಾನಂದ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಗದೀಶ ಪಾಟೀಲ, ಡಾ.ನೀಲೇಶ, ಡಾ.ಸಂತೋಷ ದಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.